ಈ ವರ್ಷ ಜನವರಿಯಲ್ಲಿ ನಡೆದಿದ್ದ 2ನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ 6 ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿ ಬಿದ್ದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ನವದೆಹಲಿ(ಮಾ.08): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟಕ್ಕೂ ಡೋಪಿಂಗ್ ಕರಿ ನೆರಳು ತಾಕಿದೆ. ಈ ವರ್ಷ ಜನವರಿಯಲ್ಲಿ ನಡೆದಿದ್ದ 2ನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ 6 ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿ ಬಿದ್ದಿದ್ದಾರೆ.
6 ಮಂದಿ ಪೈಕಿ ಮೂವರು ಕುಸ್ತಿಪಟುಗಳು, ತಲಾ ಒಬ್ಬ ಟ್ರ್ಯಾಕ್ ಅಂಡ್ ಫೀಲ್ಡ್, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್ ಕ್ರೀಡಾಪಟು ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಯಂತ್ರಣ ಘಟಕ (ನಾಡಾ) ತಿಳಿಸಿದೆ. ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಜತೆಗೆ ಈ ಕ್ರೀಡಾಪಟುಗಳನ್ನು ಇನ್ನೂ ಅಮಾನತುಗೊಳಿಸಿಲ್ಲ.
ಕ್ರೀಡಾಪಟುಗಳ ಮೂತ್ರ ಹಾಗೂ ರಕ್ತ ಮಾದರಿಯಲ್ಲಿ ನಿಷೇಧಿತ ಅಂಶಗಳು ಪತ್ತೆಯಾಗಿವೆ. ದೈಹಿಕ ಸಾಮರ್ಥ್ಯ, ರಕ್ತದಲ್ಲಿ ಆಮ್ಲಜನಕ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಇನ್ನೂ ಹಲವು ರೀತಿಯಲ್ಲಿ ಲಾಭ ಪಡೆಯಲು ಮದ್ದು ಸೇವಿಸಿದ್ದಾರೆ ಎಂದು ನಾಡಾ ತಿಳಿಸಿದೆ. ಸಿಕ್ಕಿ ಬಿದ್ದಿರುವ ಕ್ರೀಡಾಪಟುಗಳ ಪೈಕಿ ಬಹುತೇಕರು ಉದ್ದೇಶಪೂರ್ವಕವಾಗಿಯೇ ಮದ್ದು ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಪುಣೆಯಲ್ಲಿ ನಡೆದಿದ್ದ ಕ್ರೀಡಾಕೂಟದ ವೇಳೆ ಕ್ರೀಡಾಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟಾರೆ 476 ಕ್ರೀಡಾಪಟುಗಳು ರಕ್ತ ಹಾಗೂ ಮೂತ್ರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇನ್ನೂ 32 ಪರೀಕ್ಷಾ ವರದಿ ಹೊರಬರಬೇಕಿದ್ದು, ಮತ್ತಷ್ಟುಕ್ರೀಡಾಪಟುಗಳು ಸಿಕ್ಕಿಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮೊದಲ ಆವೃತ್ತಿ ವೇಳೆ 12 ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 8, 2019, 11:15 AM IST