ದೊಡ್ಡ ಮೊತ್ತ ಕಲೆಹಾಕುವ ಆಲೋಚನೆಯಲ್ಲಿದ್ದ ಹೈದರಾಬಾದ್'ಗೆ ಆಘಾತ ನೀಡಿದ ಗೋಪಾಲ್ ಕೇವಲ 17 ರನ್ ನೀಡಿ 5 ವಿಕೆಟ್ ಪಡೆದು ಹೈದರಾಬಾದ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾದರು.

ಶಿವಮೊಗ್ಗ(ಅ.25): ಯುವ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಕರಾರುವಕ್ಕಾದ ಬೌಲಿಂಗ್ ಹಾಗೂ ಕರುಣ್ ನಾಯರ್ ಮತ್ತು ಸ್ಟುವರ್ಟ್ ಬಿನ್ನಿ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ವಿರುದ್ಧ ಕರ್ನಾಟಕ 174 ರನ್'ಗಳ ಮುನ್ನಡೆ ಸಾಧಿಸಿದ್ದು, ವಿನಯ್ ಕುಮಾರ್ ಪಡೆ ಸುಭದ್ರ ಸ್ಥಿತಿಯತ್ತ ದಾಪುಗಾಲಿಟ್ಟಿದೆ.

ಇಲ್ಲಿನ ಕೆಎಸ್'ಸಿಎ ಮೈದಾನದಲ್ಲಿ ನಡೆದ ಎರಡನೇ ದಿನದಾಟದಲ್ಲಿ ಹೈದರಾಬಾದ್ ತಂಡವನ್ನು ಕೇವಲ 136 ರನ್'ಗಳಿಗೆ ಕಟ್ಟಿಹಾಕುವುದರೊಂದಿಗೆ ಮೊದಲ ಇನಿಂಗ್ಸ್'ನಲ್ಲಿ 47 ರನ್'ಗಳ ಮುನ್ನಡೆ ಕಾಯ್ದುಕೊಂಡ ಕರ್ನಾಟಕ ಎರಡನೇ ದಿನದಾಟ ಮುಕ್ತಾಯದ ವೇಳೆಗೆ 4 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿದೆ. ಕರುಣ್ ನಾಯರ್(37*) ಹಾಗೂ ಸ್ಟುವರ್ಟ್ ಬಿನ್ನಿ(26*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟವನ್ನು ಕರ್ನಾಟಕ ಸಂಪೂರ್ಣವಾಗಿ ಬ್ಯಾಟಿಂಗ್'ಗೆ ಬಳಸಿಕೊಂಡರೆ, ಶಿವಮೊಗ್ಗದಲ್ಲಿ ವಿನಯ್ ಪಡೆ ಮತ್ತೊಮ್ಮೆ ಜಯದ ನಗೆ ಬೀರಬಹುದಾಗಿದೆ.

ಮತ್ತೆ ರಾಹುಲ್ ಫೇಲ್: ಮೊದಲ ಇನಿಂಗ್ಸ್'ನಲ್ಲಿ ಕೇವಲ 4 ರನ್ ಗಳಿಸಿದ್ದ ಕೆಎಲ್ ರಾಹುಲ್ ಎರಡನೇ ಇನಿಂಗ್ಸ್'ನಲ್ಲಾದರೂ ಭರ್ಜರಿ ಬ್ಯಾಟಿಂಗ್ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ 23 ರನ್'ಗಳಿಸಿದ್ದಾಗ ಮೆಹದಿ ಹಸನ್'ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ಮೆಹದಿ ಹಸನ್'ಗೆ ನಾಲ್ವರು ಕ್ಲೀನ್ ಬೌಲ್ಡ್: ಎರಡನೇ ಇನಿಂಗ್ಸ್'ನಲ್ಲಿ ಚುರುಕಿನ ದಾಳಿ ಸಂಘಟಿಸಿದ ಹೈದರಾಬಾದ್'ನ ಮೆಹದಿ ಹಸನ್ ಕರ್ನಾಟಕದ ನಾಲ್ವರು ಬ್ಯಾಟ್ಸ್'ಮನ್'ಗಳಾದ ಆರ್. ಸಮರ್ಥ್, ಕೆಎಲ್ ರಾಹುಲ್, ಮಯಾಂಕ್ ಅಗರ್'ವಾಲ್ ಹಾಗೂ ಕೆ. ಗೌತಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಸಫಲವಾದರು.

ಹೈದರಾಬಾದ್'ಗೆ ಪೆಟ್ಟುಕೊಟ್ಟ ಶ್ರೇಯಸ್:

ಕರ್ನಾಟಕದ ಯುವ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಲ್ ಎರಡನೇ ದಿನದಾಟದ ಆರಂಭದಲ್ಲೇ ಶಾಕ್ ನೀಡುವಲ್ಲಿ ಯಶಸ್ವಿಯಾದರು. ದೊಡ್ಡ ಮೊತ್ತ ಕಲೆಹಾಕುವ ಆಲೋಚನೆಯಲ್ಲಿದ್ದ ಹೈದರಾಬಾದ್'ಗೆ ಆಘಾತ ನೀಡಿದ ಗೋಪಾಲ್ ಕೇವಲ 17 ರನ್ ನೀಡಿ 5 ವಿಕೆಟ್ ಪಡೆದು ಹೈದರಾಬಾದ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ ಮೊದಲ ಇನಿಂಗ್ಸ್: 183/10

ಸ್ಟುವರ್ಟ್ ಬಿನ್ನಿ: 61

ಮೊಹಮ್ಮದ್ ಸಿರಾಜ್: 42/4

ಹೈದರಾಬಾದ್ ಮೊದಲ ಇನಿಂಗ್ಸ್: 136/10

ಕೊಲ್ಲ ಸುಮಂತ್: 68

ಕರ್ನಾಟಕ ಎರಡನೇ ಇನಿಂಗ್ಸ್: 127/4

ಕರುಣ್ ನಾಯರ್: 37*

ಮೆಹದಿ ಹಸನ್: 54/4