ಕರ್ನಾಟಕ ಬ್ಯಾಟ್ಸ್'ಮನ್'ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ಎರಡನೇ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 395 ರನ್ ಕಲೆ ಹಾಕಿದ್ದು, 222 ರನ್'ಗಳ ಮುನ್ನಡೆ ಸಾಧಿಸಿದೆ.

ನಾಗ್ಪುರ(ಡಿ.08): ಮೊದಲ ದಿನವೇ ಮುಂಬೈ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಕರ್ನಾಟಕದ ಅಬ್ಬರ ಎರಡನೇ ದಿನವೂ ಮುಂದುವರೆದಿದೆ. ಕರ್ನಾಟಕ ಬ್ಯಾಟ್ಸ್'ಮನ್'ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ಎರಡನೇ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 395 ರನ್ ಕಲೆ ಹಾಕಿದ್ದು, 222 ರನ್'ಗಳ ಮುನ್ನಡೆ ಸಾಧಿಸಿದೆ.

ಒಂದು ವಿಕೆಟ್ ನಷ್ಟಕ್ಕೆ 83 ರನ್'ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಕರ್ನಾಟಕ ಮತ್ತೆ ಉತ್ತಮ ಆರಂಭವನ್ನೇ ಪಡೆಯಿತು. 78 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಮಯಾಂಕ್ ಅಗರ್'ವಾಲ್ ಶಿವಂ ಮಲ್ಹೋತ್ರಗೆ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ಕರುಣ್ ನಾಯರ್ ಹಾಗೂ ಪವನ್ ದೇಶ್'ಪಾಂಡೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕರ್ನಾಟಕ 4 ವಿಕೆಟ್ ಕಳೆದುಕೊಂಡು 183 ರನ್'ಗಳಿತ್ತು.

ಆ ಬಳಿಕ ಕೌನೇನ್ ಅಬ್ಬಾಸ್ 50 ರನ್ ಬಾರಿಸಿ ದುಬೈಗೆ ಎಲ್'ಬಿ ಬಲೆಗೆ ಬಿದ್ದರು. ಆ ನಂತರ ವಿಕೆಟ್ ಕೀಪರ್ ಸಿಎಂ ಗೌತಮ್-ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾದರು. ಈ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಮುನ್ನೂರರ ಗಡಿ ದಾಟಿಸಿದರು. ಗೌತಮ್ 79 ರನ್ ಬಾರಿಸಿ ದುಬೈ ಎಲ್'ಬಿ ಬಲೆಗೆ ಬಿದ್ದರು. ಅರ್ಧಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿರುವ ಶ್ರೇಯಸ್ ಗೋಪಾಲ್(80*) ಹಾಗೂ ವಿನಯ್ ಕುಮಾರ್(31*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮುಂಬೈ ಪರ ಶಿಸ್ತಿನ ದಾಳಿ ನಡೆಸಿದ ಶಿವಂ ದುಬೈ 5 ವಿಕೆಟ್ ಪಡೆದರೆ, ಶಿವಂ ಮಲ್ಹೋತ್ರ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ: 173/10

ಧವಳ್ ಕುಲಕರ್ಣಿ: 75

ವಿನಯ್ ಕುಮಾರ್: 34/6

ಕರ್ನಾಟಕ: 395/6

ಶ್ರೇಯಸ್ ಗೋಪಾಲ್: 80*

ಶಿವಂ ದುಬೈ: 79/5

(*ಎರಡನೇ ದಿನದಾಟ ಮುಕ್ತಾಯಕ್ಕೆ)