ಬರೋಡಾ ಈ ಗೆಲುವಿನೊಂದಿಗೆ ಸೆಮಿಫೈನಲ್'ಗೆ ಲಗ್ಗೆ ಹಾಕಿದೆ.

ನವದೆಹಲಿ(ಮಾ. 12): ಸತತ ಆರು ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ನಾಕೌಟ್ ಹಂತ ಪ್ರವೇಶಿಸಿದ್ದ ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಿಂದ ಹೊರಬಿದ್ದಿದೆ. ಇಂದು ಫಿರೋಜ್'ಶಾ ಕೋಟ್ಲಾ ಮೈದಾನದಲ್ಲಿ ನಡೆದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಬರೋಡಾ ಎದುರು ಕರ್ನಾಟಕ 7 ವಿಕೆಟ್'ಗಳಿಂದ ಸುಲಭವಾಗಿ ಸೋಲಪ್ಪಿದೆ. ಗೆಲುವಿಗೆ ಕರ್ನಾಟಕ ಒಡ್ಡಿದ 234 ರನ್ ಗುರಿಯನ್ನು ಬರೋಡಾ ಇನ್ನೂ 25 ಎಸೆತ ಬಾಕಿ ಇರುವಂತೆಯೇ ಮೆಟ್ಟಿ ನಿಂತಿತು. ಕೇದಾರ್ ದೇವಧರ್ ಮತ್ತು ಕೃಣಾಲ್ ಪಾಂಡ್ಯ ಬರೋಡಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೃಣಾಳ್ ಪಾಂಡ್ಯ ಆಲ್'ರೌಂಡ್ ಪ್ರದರ್ಶನದಿಂದ ಗಮನ ಸೆಳೆದರು. ಬೌಲಿಂಗ್'ನಲ್ಲಿ 3 ವಿಕೆಟ್ ಕಬಳಿಸಿದ್ದ ಪಾಂಡ್ಯ, ಬ್ಯಾಟಿಂಗ್'ನಲ್ಲಿ ಕೇವಲ 79 ಬಾಲ್'ನಲ್ಲಿ 70 ರನ್ ಚಚ್ಚಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಉತ್ತಮ ಆರಂಭ ಪಡೆಯಿತು. 34ನೇ ಓವರ್'ವರೆಗೂ ಕರ್ನಾಟಕದ ಬ್ಯಾಟಿಂಗ್ ಸ್ಥಿತಿ ಸುಭದ್ರವಾಗಿಯೇ ಇತ್ತು. ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 170 ರನ್ ಗಡಿ ಮುಟ್ಟಿದ್ದ ಕರ್ನಾಟಕ, ಪವನ್ ದೇಶಪಾಂಡೆ ನಿರ್ಗಮನದ ಬಳಿಕ ಹಳಿತಪ್ಪಿತು. ಆರ್.ಸಮರ್ಥ್ ಮತ್ತು ಪವನ್ ಮಧ್ಯೆ 4ನೇ ವಿಕೆಟ್'ಗೆ 87 ರನ್ ಜೊತೆಯಾಟ ಬಂದಿದ್ದು ಕರ್ನಾಟಕದ ಇನ್ನಿಂಗ್ಸ್'ನ ಹೈಲೈಟ್. ಆದರೆ ಅರ್ಧಶತಕದ ಗಡಿ ದಾಟಿದ್ದ ಪವನ್ ದೇಶಪಾಂಡೆ ಮಾತ್ರವೇ. ಅವರನ್ನು ಬಿಟ್ಟರೆ ಮಯಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ತಮಿಳುನಾಡಿಗೂ ಗೆಲುವು:
ಬರೋಡಾ ಈ ಗೆಲುವಿನೊಂದಿಗೆ ಸೆಮಿಫೈನಲ್'ಗೆ ಲಗ್ಗೆ ಹಾಕಿದೆ. ಬರೋಡಾ ಜೊತೆ ತಮಿಳುನಾಡು ಕೂಡ ನಾಲ್ಕರ ಹಂತ ತಲುಪಿತು. ದೆಹಲಿಯ ಪಲಂನಲ್ಲಿರುವ ಏರ್'ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಮತ್ತೊಂದು ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆಲುವು ಸಾಧಿಸಿ ತಮಿಳುನಾಡು ಸೆಮಿಸ್ ಪ್ರವೇಶಿಸಿತು. ಗಂಗಾ ಶ್ರೀಧರ್ ರಾಜು ಅವರ ಭರ್ಜರಿ ಆಟದ ನೆರವಿನಿಂದ ತಮಿಳುನಾಡು 212 ರನ್ ಗುರಿಯನ್ನು ಸುಲಭವಾಗಿ ಮುಟ್ಟಿ 5 ವಿಕೆಟ್'ಗಳಿಂದ ಜಯಭೇರಿ ಭಾರಿಸಿತು.

ಮತ್ತೆರಡು ಕ್ವಾರ್ಟರ್'ಫೈನಲ್'ಗಳು ಮಾರ್ಚ್ 15ರಂದು ನಡೆಯಲಿದೆ. ವಿದರ್ಭಾ ವರ್ಸಸ್ ಜಾರ್ಖಂಡ್ ಹಾಗೂ ಬಂಗಾಳ ವರ್ಸಸ್ ಮಹಾರಾಷ್ಟ್ರ ಹಣಾಹಣಿಯಾಗಲಿದೆ. 16 ಮತ್ತು 17ರಂದು ಸೆಮಿಫೈನಲ್ಸ್ ನಡೆದರೆ ಮಾ. 19ರಂದು ಫೈನಲ್ ಪಂದ್ಯ ನಡೆಯಲಿದೆ.

ಸ್ಕೋರು ವಿವರ:

ಕರ್ನಾಟಕ 48.5 ಓವರ್ 233 ರನ್ ಆಲೌಟ್
(ಪವನ್ ದೇಶಪಾಂಡೆ 54, ಆರ್.ಸಮರ್ಥ್ 44, ಮಯಂಕ್ ಅಗರ್ವಾಲ್ 40, ರಾಬಿನ್ ಉತ್ತಪ್ಪ 24, ಅನಿರುದ್ಧ್ ಜೋಶಿ 18, ಜಗದೀಶ್ ಸುಚಿತ್ 18 ರನ್ - ಕೃಣಾಳ್ ಪಾಂಡ್ಯ 32/3)

ಬರೋಡಾ 45.5 ಓವರ್ 234/3
(ಕೇದಾರ್ ದೇವಧರ್ 78, ಕೃಣಾಲ್ ಪಾಂಡ್ಯ 70, ದೀಪಕ್ ಹೂಡಾ ಅಜೇಯ 34, ಆದಿತ್ಯ ವಾಗ್ಮೋಡೆ 26 ರನ್ - ಎಸ್.ಅರವಿಂದ್ 42/2)

(ಫೋಟೋದಲ್ಲಿರುವುದು ಕೃಣಾಲ್ ಪಾಂಡ್ಯ)