ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಒಲಿಂಪಿಕ್ಸ್‌ಗೆ ತರಬೇತಿ, ಜಿಲ್ಲಾ ಕ್ರೀಡಾಂಗಣಗಳ ನಿರ್ಮಾಣ, ಸೈಕ್ಲಿಂಗ್ ವೆಲೋಡ್ರೋಮ್, ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿ, ಶೂಟಿಂಗ್ ರೇಂಜ್ ಸ್ಥಾಪನೆ, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ, ಕ್ರೀಡಾ ಶಾಲೆಗಳ ಉನ್ನತೀಕರಣ, ಕ್ರೀಡಾ ವಿಜ್ಞಾನ ಕೇಂದ್ರಗಳ ಸ್ಥಾಪನೆ, ಈಜುಕೊಳಗಳ ಮೇಲ್ದರ್ಜೆಗೇರಿಸುವುದು ಮತ್ತು ಕ್ರೀಡಾಪಟುಗಳಿಗೆ ಹಾಜರಾತಿ ವಿನಾಯಿತಿ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ.
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 16ನೇ ಬಜೆಟ್ ಮಂಡಿಸಿದ್ದು, ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು 4 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕೃಷಿ, ಪಶುಸಂಗೋಪನೆ, ಆಹಾರ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ವಿಭಾಗಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ. ಇನ್ನು ಇದರ ಜತೆಗೆ ಕ್ರೀಡೆ ಹಾಗೂ ಯುವ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಕ್ಷೇತ್ರಕ್ಕೂ ಸಿದ್ದರಾಮಯ್ಯ ಬಂಪರ್ ಗಿಫ್ಟ್ ನೀಡಿದ್ದಾರೆ.
ಬನ್ನಿ, ನಾವು ಈ ಲೇಖನದಲ್ಲಿ ಸಿದ್ದರಾಮಯ್ಯ ಕ್ರೀಡಾಕ್ಷೇತ್ರಕ್ಕೆ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ.
1. ಗುರಿ-ಒಲಿಂಪಿಕ್ ಪದಕ ಯೋಜನೆಯಡಿ ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ, ಒಲಿಂಪಿಕ್ಸ್ 2028ಕ್ಕೆ ತಯಾರಿ ಕೈಗೊಳ್ಳಲು ವಾರ್ಷಿಕ ತಲಾ 10 ಲಕ್ಷ ರುಪಾಯಿಯಂತೆ ಪ್ರೋತ್ಸಾಹ ಧನವನ್ನು ಮೂರು ವರ್ಷ ನೀಡಲಾಗುವುದು. ಈ ವರ್ಷಕ್ಕೆ 6 ಕೋಟಿ ರುಪಾಯಿ ಒದಗಿಸಲಾಗುವುದು.
2. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ರುಪಾಯಿ ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿಗೆ ತಲಾ 3 ಕೋಟಿ ರುಪಾಯಿಗಳಂತೆ ಒಟ್ಟು 6 ಕೋಟಿ ರುಪಾಯಿ ಒದಗಿಸಲಾಗುವುದು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಫುಟ್ಬಾಲ್ ನಿವೃತ್ತಿ ಹಿಂಪಡೆದ ದಿಗ್ಗಜ ಸುನಿಲ್ ಚೆಟ್ರಿ!
3. ನಿವೇಶನ ಲಭ್ಯವಿರುವ 12 ತಾಲ್ಲೂಕು ಕೇಂದ್ರಗಳಿಗೆ ತಲಾ 2 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಒಟ್ಟು 12 ಕೋಟಿ ರೂ ಒದಗಿಸಲಾಗುವುದು.
4. ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲ್ಲೂಕು ಕ್ರೀಡಾಂಗಣವನ್ನು ಆರು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು.
5. ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ನಿರ್ಮಿಸಲಾಗುವುದು. 3 ಕೋಟಿ ರೂ. ವೆಚ್ಚದಲ್ಲಿ
6. ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಭ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಲಾಗುವುದು. 2025-26 ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 2 ಕೋಟಿ ರೂ. ಒದಗಿಸಲಾಗುವುದು.
7. ಕೊಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 3 ಕೋಟಿ ರುಪಾಯಿ ಒದಗಿಸಲಾಗುವುದು. ಯಾದಗಿರಿಯ ಶಹಾಪುರದಲ್ಲಿ ಸುಸಜ್ಜುತವಾದ ಕ್ರೀಡಾ ವಸತಿ ಶಾಲೆಯನ್ನು 10 ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಲಾಗುವುದು.
ಇದನ್ನೂ ಓದಿ: ರಾಜಧಾನಿ ಅಭಿವೃದ್ಧಿಗೆ 7,000 ಕೋಟಿ ರೂ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬಂಪರ್ ಕೊಡುಗೆ!
8. ಮೈಸೂರು ಹಾಗೂ ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು 7 ಕೋಟಿ ರುಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
9. ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳವನ್ನು ಹೀಟಿಂಗ್ ಮತ್ತು ಡೈವಿಂಗ್ ಪೂಲ್ ವ್ಯವಸ್ಥೆಗಳನ್ನೊಳಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಚಾಮರಾಜನಗರದಲ್ಲಿ ಒಲಿಂಪಿಕ್ಸ್ ಮಾದರಿಯ(50 ಮೀಟರ್) ಈಜುಕೊಳವನ್ನು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
10. ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರುಪಾಯಿಗಳನ್ನು ಒದಗಿಸಲಾಗುವುದು.
11. ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗುವಂತೆ ಶಾಲಾ-ಕಾಲೇಜುಗಳ (ವೃತ್ತಿಪರ ಕಾಲೇಜುಗಳು ಸೇರಿದಂತೆ) ವಾರ್ಷಿಕ ಹಾಜರಾತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳಿಗೆ ಶೇ.15ರಷ್ಟು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ.5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನೀಡಲಾಗುವುದು.
12. ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ತಲಾ 5 ಲಕ್ಷ ರುಪಾಯಿವರೆಗೆ ನೆರವು ನೀಡಲಾಗುವುದು.
13. ನಿವೃತ್ತಿ ಹೊಂದಿದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಮಾಸಾಶನವನ್ನು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ 6,000 ರುಪಾಯಿಗಳವರೆಗೆ, ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ 5,000 ರುಪಾಯಿಗಳಿಗೆ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 4,500 ರುಪಾಯಿಗಳಿಗೆ ಹೆಚ್ಚಿಸಲಾಗುವುದು.
14. ಒಲಂಪಿಕ್ಸ್, ಕಾಮನ್‌ವೆಲ್ತ್ ಹಾಗೂ ಏಷಿಯನ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳ ಸೇವೆಯನ್ನು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಪಡೆಯಲಾಗುವುದು.
