ಒಟ್ಟಾರೆ ನಾಲ್ಕು ಪಂದ್ಯಗಳಿಂದ 16 ಅಂಕ ಪಡೆದಿರುವ ಕರ್ನಾಟಕ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೂ ಕರ್ನಾಟಕಕ್ಕೆ ಕ್ವಾರ್ಟರ್'ಫೈನಲ್ ಸ್ಥಾನ ಕಟ್ಟಿಟ್ಟ ಬುತ್ತಿಯಾಗಲಿದೆ.
ಕೋಲ್ಕತಾ(ಮಾ. 03): ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಇಂದು ಕಲ್ಯಾಣಿಯ ಬೆಂಗಾಳ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಡಿ ಗುಂಪಿನ ಎಕದಿನ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಕರ್ನಾಟಕ 7 ವಿಕೆಟ್'ಗಳಿಂದ ಭರ್ಜರಿ ಜಯ ಪಡೆದಿದೆ. ಜಮ್ಮು-ಕಾಶ್ಮೀರವನ್ನು ಕೇವಲ 108 ರನ್ನಿಗೆ ಆಲೌಟ್ ಮಾಡಿದ ಕರ್ನಾಟಕ 18ನೇ ಓವರ್'ನಲ್ಲೇ ಗೆಲುವಿನ ಗುರಿ ಮುಟ್ಟಿತು. ಕೆ.ಗೌತಮ್(ಅಜೇಯ 53) ಮತ್ತು ಮನೀಶ್ ಪಾಂಡೆ (ಅಜೇಯ 27) ಕರ್ನಾಟಕದ ಬ್ಯಾಟಿಂಗ್'ಗೆ ಶಕ್ತಿ ತುಂಬಿದರು. ಇವರಿಬ್ಬರು 4ನೇ ವಿಕೆಟ್'ಗೆ 58 ರನ್'ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆದರೆ, ಇವರ ಜೊತೆಯಾಟ ಬರುವ ಮುನ್ನ ಮೊಹಮ್ಮದ್ ಮುದಸಿರ್ ಅವರ ಮಾರಕ ಬೌಲಿಂಗ್'ಗೆ ಸಿಕ್ಕು ಕರ್ನಾಟಕವು 52 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಆಳದ ಬ್ಯಾಟಿಂಗ್ ಹೊಂದಿರುವ ಕರ್ನಾಟಕಕ್ಕೆ ಗೆಲುವು ಕಷ್ಟವಾಗಲಿಲ್ಲ.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರಕ್ಕೆ ಎಲ್ಲಿಯೂ ಒಳ್ಳೆಯ ಜೊತೆಯಾಟ ಸಿಗಲಿಲ್ಲ. ಮಧ್ಯಮ ಕ್ರಮಾಂಕದ ಮಂಜೂರ್ ದರ್ 20 ರನ್ ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಸ್ಕೋರಾಯಿತು. ಕರ್ನಾಟಕದ ಪ್ರಸಿದ್ಧ್ ಕೃಷ್ಣ 7 ಓವರ್ ಬೌಲ್ ಮಾಡಿ ಕೇವಲ 15 ರನ್ನಿತ್ತು 5 ವಿಕೆಟ್ ಕಬಳಿಸಿ ಕಾಶ್ಮೀರಿಗಳ ಬೆನ್ನೆಲುಬು ಮುರಿದರು.
ಕರ್ನಾಟಕಕ್ಕೆ ಇದು ಸತತ ನಾಲ್ಕನೇ ಗೆಲುವಾಗಿದೆ. ಈ ಮುಂಚೆ ಜಾರ್ಖಂಡ್, ಸರ್ವಿಸಸ್ ಮತ್ತು ಸೌರಾಷ್ಟ್ರ ತಂಡಗಳ ವಿರುದ್ಧ ಜಯಭೇರಿ ಭಾರಿಸಿತ್ತು. ಇನ್ನು ಮುಂದಿನ ಪಂದ್ಯಗಳಲ್ಲಿ ಹೈದರಾಬಾದ್ ಮತ್ತು ಛತ್ತೀಸ್'ಗಡ ತಂಡಗಳನ್ನು ಎದುರುಗೊಳ್ಳಲಿದೆ.
ಒಟ್ಟಾರೆ ನಾಲ್ಕು ಪಂದ್ಯಗಳಿಂದ 16 ಅಂಕ ಪಡೆದಿರುವ ಕರ್ನಾಟಕ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಹೈದರಾಬಾದ್ ತಂಡ ಎರಡನೇ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೂ ಕರ್ನಾಟಕಕ್ಕೆ ಕ್ವಾರ್ಟರ್'ಫೈನಲ್ ಸ್ಥಾನ ಕಟ್ಟಿಟ್ಟ ಬುತ್ತಿಯಾಗಲಿದೆ.
ಸ್ಕೋರು ವಿವರ:
ಜಮ್ಮು-ಕಾಶ್ಮೀರ 28.4 ಓವರ್ 108 ರನ್ ಆಲೌಟ್
(ಮಂಝೂರ್ ದರ್ 20, ರಾಮ್ ದಯಾಳ್ 14, ಇಯಾನ್ ಚೌಹಾಣ್ 13, ಪರ್ವೆಜ್ ರಸೂಲ್ ರಿಟೈರ್ಟ್ ಔಟ್ 12, ಪುನೀತ್ ಬಿಷ್ತ್ 12 ರನ್ - ಎಂ.ಪ್ರಸಿದ್ಧ್ ಕೃಷ್ಣ 15/4, ಸ್ಟುವರ್ಟ್ ಬಿನ್ನಿ 30/2)
ಕರ್ನಾಟಕ 17.4 ಓವರ್ 110/3
(ಕೆ.ಗೌತಮ್ ಅಜೇಯ 53, ಮನೀಶ್ ಪಾಂಡೆ ಅಜೇಯ 27, ಆರ್.ಸಮರ್ಥ್ 11 ರನ್ - ಮೊಹಮ್ಮದ್ ಮುಧಸಿರ್ 53/3)
