ಕೆನಡಾ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ಫೈಸಲ್..! U-19 ಕೆನಡಾ ತಂಡದಲ್ಲಿ 8 ಭಾರತೀಯರು

Karnataka Based Faisal Jamkhandi is in Canada U 19 Cricket Team
Highlights

‘ಕಳೆದ ವರ್ಷ ಐಪಿಎಲ್‌'ನಲ್ಲಿ ಪುಣೆ ತಂಡದ ನೆಟ್ ಬೌಲರ್ ಆಗಿದ್ದ ಫೈಸಲ್ ಧೋನಿ, ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕರಿಗೆ ಬೌಲ್ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರ,ದೆಹಲಿ ರಣಜಿ ತಂಡಗಳ ಅಭ್ಯಾಸಕ್ಕೂ ಸಹಕರಿಸಿದ್ದಾರೆ. ಇರ್ಫಾನ್ ಪಠಾಣ್‌'ರಂತಹ ಶ್ರೇಷ್ಠ ಬೌಲರ್‌'ರಿಂದ ಫೈಸಲ್ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಫೈಸಲ್‌'ಗೆ ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ಆತನಿಗೆ ಭಾರತವೇ ಅಚ್ಚುಮೆಚ್ಚು’ ಎಂದು ಫಯಾಜ್ ಹೇಳಿದರು.

ಬೆಂಗಳೂರು(ಜ.19): ಭಾರತ ಮೂಲದ ಆಟಗಾರರು ಬೇರೆ ರಾಷ್ಟ್ರಗಳನ್ನು ಪ್ರತಿನಿಧಿಸುವುದು ಹೊಸದೇನಲ್ಲ. ಸದ್ಯ ನಡೆಯುತ್ತಿರುವ ಅಂಡರ್-19 ಕ್ರಿಕೆಟ್ ವಿಶ್ವಕಪ್‌'ನಲ್ಲಿ ಕೆನಡಾ ತಂಡದಲ್ಲಿ ಬರೋಬ್ಬರಿ 8 ಆಟಗಾರರು ಭಾರತೀಯ ಮೂಲದವರಾಗಿದ್ದಾರೆ. ವಿಶೇಷ ಎಂದರೆ, ಆ 8 ಆಟಗಾರರ ಪೈಕಿ ಒಬ್ಬ ಕರ್ನಾಟಕ ಮೂಲದ ಆಟಗಾರ. ಆತನ ಹೆಸರು ಫೈಸಲ್ ಜಮಖಂಡಿ. ಬಾಗಲಕೋಟೆ ಜಿಲ್ಲೆ, ಜಮಖಂಡಿ ಮೂಲದ 18 ವರ್ಷದ ವೇಗದ ಬೌಲರ್, ಪ್ರಸಕ್ತ ಟೂರ್ನಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 48 ರನ್‌'ಗೆ 5 ವಿಕೆಟ್ ಪಡೆದ ಫೈಸಲ್, ಎಲ್ಲರ ಗಮನ ಸೆಳೆದಿದ್ದಾರೆ. ಫೈಸಲ್‌'ರ ತಂದೆ ಜಮಖಂಡಿಯವರು. ಆದರೆ 1994ರಲ್ಲಿ ಕೆನಡಾಕ್ಕೆ ತೆರಳಿ, ಅಲ್ಲೇ ವಾಸಿಸುತ್ತಿದ್ದಾರೆ. ಫೈಸಲ್ ಜನಿಸಿದ್ದು ಕೆನಡಾದಲ್ಲಿ. ಐಸ್ ಹಾಕಿ ಆಟಗಾರನಾಗಿದ್ದ ಅವರು ಕ್ರಿಕೆಟ್‌'ನತ್ತ ಒಲವು ಬೆಳೆಸಿಕೊಂಡು, ಇದೀಗ ವೃತ್ತಿಪರ ಕ್ರಿಕೆಟರ್ ಆಗುವತ್ತ ಹೆಜ್ಜೆ ಹಾಕಿದ್ದಾರೆ.

11ನೇ ವರ್ಷವಿದ್ದಾಗ ಕ್ರಿಕೆಟ್ ಆರಂಭ: ಕೆನಡಾದಲ್ಲಿ ಕ್ರಿಕೆಟ್ ಕೇವಲ ಬೇಸಿಗೆಗೆ ಮಾತ್ರ ಸೀಮಿತ. ಅಥ್ಲೆಟಿಕ್ಸ್'ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದರೂ ಫೈಸಲ್ ಮನಸು ಸದಾ ಕ್ರಿಕೆಟ್ ಕಡೆಯೇ ವಾಲುತ್ತಿತ್ತು. 11 ವರ್ಷ ವಯಸ್ಸಿದ್ದಾಗ ಕ್ರಿಕೆಟ್ ಆರಂಭಿಸಿದ ಅವರು, ವೇಗದ ಬೌಲರ್ ಆಗಲು ನಿರ್ಧರಿಸಿದರು. ಕ್ರಿಕೆಟನ್ನೇ ವೃತ್ತಿಯಾಗಿಸಿಕೊಳ್ಳಲು ತೀರ್ಮಾನಿಸಿದ ಫೈಸಲ್, 4 ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದರು. ಇಲ್ಲಿ 6 ತಿಂಗಳ ಕಾಲ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಅವರು, ಇನ್ನುಳಿದ ಸಮಯದಲ್ಲಿ ಕೆನಡಾ ಹಾಗೂ ಅಲ್ಲಿನ ತಮ್ಮ ಕ್ಲಬ್ ಪರ ಪಂದ್ಯಗಳನ್ನು ಆಡುತ್ತಾರೆ.

ಬೆಂಗಳೂರಲ್ಲೂ ಅಭ್ಯಾಸ ನಡೆಸಿದ್ದ ಫೈಸಲ್: 3 ವರ್ಷಗಳ ಹಿಂದೆ ಫೈಸಲ್ ಕೆನಡಾದಿಂದ ಬ್ರಿಟನ್‌'ಗೆ ಆಗಮಿಸಿದರು. ಇಂಗ್ಲೆಂಡ್ ದೇಸಿ ಕ್ರಿಕೆಟ್‌'ನ ಹೆಸರಾಂತ ವೇಗದ ಬೌಲರ್, ಶೋಯಬ್ ಅಖ್ತರ್, ಡೇಲ್ ಸ್ಟೈಲ್‌'ರಂತಹ ಪ್ರಚಂಡ ವೇಗಿಗಳಿಗೆ ಮಾರ್ಗದರ್ಶನ ನೀಡಿರುವ, ವಿಶ್ವ ಪ್ರಸಿದ್ಧ ವೇಗದ ಬೌಲಿಂಗ್ ಕೋಚ್ ಇಯಾನ್ ಪೊಂಟ್ ಜತೆಗೆ ಕೆಲ ಕಾಲ ಅಭ್ಯಾಸ ನಡೆಸಿದರು. ಬಳಿಕ ಭಾರತಕ್ಕೆ ಆಗಮಿಸಿದ ಫೈಸಲ್, ಇಲ್ಲಿನ ಅಲ್ಟಿಮೇಟ್ ಪೇಸ್ ಫೌಂಡೇಷನ್‌'ನಲ್ಲೂ ತರಬೇತಿ ನೀಡುವ ಇಯಾನ್ ಜತೆ ಅಭ್ಯಾಸ ಮುಂದುವರಿಸಿದರು. ಬಳಿಕ ಪುಣೆ, ಹೈದರಾಬಾದ್‌'ನಲ್ಲೂ ಕೆಲ ಶಿಬಿರಗಳಲ್ಲಿ ಪಾಲ್ಗೊಂಡರು. ಫೈಸಲ್‌'ರ ಬೌಲಿಂಗ್ ಶೈಲಿ, ಆಟದ ಬಗ್ಗೆ ಅವರಿಗಿರುವ ಪ್ರೀತಿ, ಕಲಿಯಬೇಕು ಎನ್ನುವ ಹಂಬಲ ಇದೆಲ್ಲದರ ಬಗ್ಗೆ ಅವರ ಕೋಚ್ ಇಯಾನ್ ಪೊಂಟ್ ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡರು.

‘ಬ್ರಿಟನ್‌ಗೆ ಆಗಮಿಸಿದ ಫೈಸಲ್, ಕೆಲ ದಿನ ಅಲ್ಲೇ ಅಭ್ಯಾಸ ನಡೆಸಿದರು. ಅವರ ಬೌಲಿಂಗ್ ಶೈಲಿಯಲ್ಲಿ ಕೆಲ ತಾಂತ್ರಿಕ ಬದಲಾವಣೆಗಳ ಅಗತ್ಯವಿತ್ತು. ಬೌಲಿಂಗ್ ವೇಗ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬ ಸಲಹೆಗಳನ್ನು ಆಲಿಸಿ, ಅದನ್ನು ಅಳವಡಿಸಿಕೊಂಡ ಬಳಿಕ ಕೆನಡಾದ ದೇಸಿ ಪಂದ್ಯಗಳಲ್ಲಿ ಅವರು ಯಶಸ್ಸು ಸಾಧಿಸಲು ಆರಂಭಿಸಿದರು. ಬಳಿಕ, ಭಾರತಕ್ಕೆ ಆಗಮಿಸಿ ನನ್ನೊಂದಿಗೆ ಅಭ್ಯಾಸ ಮುಂದುವರಿಸಿದರು. ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ವೇಗದಲ್ಲಿ ಬದಲಾವಣೆ ಮಾಡುವತ್ತ ಹೆಚ್ಚಿನ ಗಮನ ಹರಿಸಿದೆವು. ಇನ್ನಿಂಗ್ಸ್ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಬೌಲ್ ಮಾಡುತ್ತಾರೆ. ಹೊಸ ಹಾಗೂ ಹಳೆ ಚೆಂಡು, ಎರಡನ್ನೂ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಆತ ನಿಪುಣ. ಅಂಡರ್-19 ವಿಶ್ವಕಪ್‌ನಲ್ಲಿ ಫೈಸಲ್ ಈಗಾಗಲೇ ಗಮನ ಸೆಳೆದಿದ್ದಾರೆ. ವರ್ಷಪೂರ್ತಿ ಒಂದಲ್ಲಾ ಒಂದು ಕಡೆ ಟಿ20 ಲೀಗ್‌'ಗಳು ನಡೆಯಲಿದ್ದು, ಫೈಸಲ್‌'ರಂತಹ ಯುವ ವೇಗದ ಬೌಲರ್‌'ಗಳಿಗೆ ಖಂಡಿತವಾಗಿಯೂ ಬೇಡಿಕೆಯಿದೆ. ಸದ್ಯದಲ್ಲೇ ಒಂದಲ್ಲಾ ಒಂದು ಲೀಗ್‌'ನಲ್ಲಿ ಕರ್ನಾಟಕ ಮೂಲದ ಆಟಗಾರ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.

ಧೋನಿ, ಸ್ಟೋಕ್ಸ್‌'ಗೂ ಬೌಲಿಂಗ್!

ಫೈಸಲ್ ಕ್ರಿಕೆಟ್ ಜಗತ್ತಿಗೆ ಈಗಷ್ಟೇ ಪರಿಚಯವಾಗುತ್ತಿದ್ದರೂ, ಅವರ ಪರಿಚಯ ತಾರಾ ಕ್ರಿಕೆಟಿಗರಿಗೆ ಈಗಾಗಲೇ ಇದೆ ಎಂದು ಅವರ ತಂದೆ ಫಯಾಜ್ ಜಮಖಂಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಮಗ ವಿಶ್ವಕಪ್‌'ನಲ್ಲಿ ಆಡುವುದನ್ನು ಕೆನಡಾದಲ್ಲೇ ಕೂತು ವೀಕ್ಷಿಸುತ್ತಿರುವ ಅವರು, ಆತನ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ‘ಕಳೆದ ವರ್ಷ ಐಪಿಎಲ್‌'ನಲ್ಲಿ ಪುಣೆ ತಂಡದ ನೆಟ್ ಬೌಲರ್ ಆಗಿದ್ದ ಫೈಸಲ್ ಧೋನಿ, ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕರಿಗೆ ಬೌಲ್ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರ,ದೆಹಲಿ ರಣಜಿ ತಂಡಗಳ ಅಭ್ಯಾಸಕ್ಕೂ ಸಹಕರಿಸಿದ್ದಾರೆ. ಇರ್ಫಾನ್ ಪಠಾಣ್‌'ರಂತಹ ಶ್ರೇಷ್ಠ ಬೌಲರ್‌'ರಿಂದ ಫೈಸಲ್ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಫೈಸಲ್‌'ಗೆ ಭಾರತೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ಆತನಿಗೆ ಭಾರತವೇ ಅಚ್ಚುಮೆಚ್ಚು’ ಎಂದು ಫಯಾಜ್ ಹೇಳಿದರು.

ಸ್ಪಂದನ್ ಕಣಿಯಾರ್, ಕನ್ನಡಪ್ರಭ ವಿಶೇಷ ವರದಿ

 

 

loader