ಆನ್‌ಲೈನ್‌ನಲ್ಲೇ ಜಾವೆಲಿನ್ ಕಲಿತು ಪದಕ ಗೆದ್ದ ಕರಿಶ್ಮಾ..!
ಕಳೆದ 2 ವರ್ಷದಿಂದ ಆನ್‌ಲೈನ್‌ನಲ್ಲೇ ಜಾವೆಲಿನ್ ತರಬೇತಿ ಪಡೆಯುತ್ತಿರುವ ಕರಿಶ್ಮಾ
ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಯವ ಆಟಗಾರ್ತಿ
ನೀರಜ್ ಚೋಪ್ರಾಗೂ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್ ನಾಯ್‌್ಕ ಅವರ ಬಳಿ ಆನ್‌ಲೈನ್ ಕೋಚಿಂಗ್
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಅ.25): ಈಗ ವರ್ಕ್ ಫ್ರಮ್ ಹೋಂ ಯುಗ. ಆನ್‌ಲೈನ್‌ನಲ್ಲೇ ಎಲ್ಲಾ ಕೆಲಸವೂ ಆಗುತ್ತೆ. ಕ್ರೀಡೆಯಲ್ಲೂ ಇದು ಸಾಧ್ಯವೇ ಎಂಬ ಕುತೂಹಲ ಅನೇಕರಿಗೆ ಮೂಡಿರಬಹುದು. ಹೌದು, ಸಾಧ್ಯವಿದೆ ಎಂದು ಉಡುಪಿಯ ಕರಿಶ್ಮಾ ಸನಿಲ್ ತೋರಿಸಿಕೊಟ್ಟಿದ್ದಾರೆ. ಕಳೆದ 2 ವರ್ಷದಿಂದ ಆನ್‌ಲೈನ್‌ನಲ್ಲೇ ಜಾವೆಲಿನ್ ತರಬೇತಿ ಪಡೆಯುತ್ತಿರುವ ಕರಿಶ್ಮಾ, ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕರಿಶ್ಮಾ ಉಡುಪಿ ಜಿಲ್ಲೆಯ ಬಾರ್ಕೂರಿನವರು. ಶಾಲಾ ದಿನಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗೆದ್ದ ಚಿನ್ನದ ಪದಕ ಅವರನ್ನು ಜಾವೆಲಿನ್ ಎಸೆತವನ್ನು ವೃತ್ತಿಪರವಾಗಿ ಅಭ್ಯಾಸ ಮಾಡುವಂತೆ ಮಾಡಿತು. ಅವರು ಶಾಟ್‌ಪುಟ್, ಡಿಸ್ಕಸ್‌ಥ್ರೋ, ವಾಲಿಬಾಲ್‌ನಲ್ಲೂ ಆಸಕ್ತಿ ಹೊಂದಿದ್ದರು. ಯಾವುದೇ ತರಬೇತಿ ಇಲ್ಲದೆ, ಶಾಲಾ ದೈಹಿಕ ಶಿಕ್ಷಕರ ಪ್ರೋತ್ಸಾಹದಿಂದ 2016ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಕರಿಶ್ಮಾ ಹಿಂದುರುಗಿ ನೋಡಲಿಲ್ಲ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾಗೂ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್ ನಾಯ್‌್ಕ ಅವರ ಬಳಿ ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್ ಮೂಲಕ ತರಬೇತಿ ಪಡೆಯುತ್ತಿದ್ದಾರೆ.
‘2 ವರ್ಷದಿಂದ ಆನ್‌ಲೈನ್‌ನಲ್ಲೇ ತರಬೇತಿ ಪಡೆಯುತ್ತಿದ್ದೇನೆ. ಅದಕ್ಕೆ ನಮ್ಮೂರಿನ ಶಾಲಾ ಶಿಕ್ಷಕರಾದ ರಾಜಾರಾಮ್ ನಾಯ್‌್ಕ ತುಂಬಾ ಸಹಾಯ ಮಾಡುತ್ತಾರೆ. ಕ್ರೀಡಾಕೂಟಗಳಿದ್ದಾಗ ಕಾಶೀನಾಥ್ ಸರ್ ತರಬೇತಿ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸುವ ಗುರಿ ಇದೆ’ ಎಂದು ಬಿಎಸ್ಸಿ ಪದವೀಧರೆ ಕರಿಶ್ಮಾ ‘ಕನ್ನಡಪ್ರಭ’ಕ್ಕೆ ತಮ್ಮ ಕನಸು ತಿಳಿಸಿದರು. 2017ರಿಂದ ಸತ್ಯನಾರಾಯಣ ಎಂಬವರ ಜೊತೆ ತರಬೇತಿ ಪಡೆಯುತ್ತಿದ್ದರೂ ಅವರು 2021ರಲ್ಲಿ ನಿಧನರಾದ ಬಳಿಕ ಕರಿಶ್ಮಾ ಕುಗ್ಗಿದ್ದರು. ಆ ಬಳಿಕ ಕಾಶೀನಾಥ್ ಆನ್‌ಲೈನ್ ಟ್ರೈನಿಂಗ್ ಶುರು ಮಾಡಿದರು. ಈಗ ನಿತ್ಯ 5-6 ಗಂಟೆ ಅಭ್ಯಾಸ ನಡೆಸುತ್ತಾರೆ.
National Open Athletics Championships: ಕೊನೆಯ ದಿನ ಕರ್ನಾಟಕಕ್ಕೆ 4 ಪದಕ, ರೈಲ್ವೇಸ್ ಚಾಂಪಿಯನ್
ರಾಷ್ಟ್ರ ಮಟ್ಟದಲ್ಲಿ 8 ಪದಕ: ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಮಿಂಚಿರುವ 22 ವರ್ಷದ ಕರಿಶ್ಮಾ ಈಗಾಗಲೇ ಕಿರಿಯರ ವಿಭಾಗದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 3 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಯುನಿವರ್ಸಿಟಿ ಗೇಮ್ಸ್, ಫೆಡರೇಶನ್ ಕಪ್‌ನಲ್ಲೂ ಪದಕ ಗೆದ್ದಿರುವ ಅವರು ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ 51.37 ಮೀ. ದೂರಕ್ಕೆ ಜಾವೆಲಿನ್ ಎಸೆದರು. ಸರಾಸರಿ 53-54 ಮೀ. ವರೆಗೂ ಎಸೆಯುತ್ತಿರುವ ಕರಿಶ್ಮಾಗೆ ಶೀಘ್ರ 60 ಮೀ. ತಲುಪುವ ಗುರಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು, ಪದಕ ಗೆಲ್ಲಲು ಅವರು ಸಾಕಷ್ಟು ಸುಧಾರಣೆ ಕಾಣಬೇಕಿದ್ದು, ಸೂಕ್ತ ತರಬೇತಿಯ ನಿರೀಕ್ಷೆಯಲ್ಲಿದ್ದಾರೆ.
ನನ್ನ ತಾಯಿ ಇಂದಿರಾ ಅವರೇ ನನಗೆ ಸ್ಫೂರ್ತಿ. ನನ್ನ ಬ್ಬೆನ್ನೆಲುಬಾಗಿ ನಿಂತಿದ್ದಾರೆ. ಅವರೊಬ್ಬ ಶಾಲಾ ಶಿಕ್ಷಕಿ. ನನ್ನೆಲ್ಲಾ ಖರ್ಚು ವೆಚ್ಚಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಸರ್ಕಾರ, ಪ್ರಾಯೋಜಕರಿಂದ ನೆರವು ಸಿಕ್ಕರೆ ಇನ್ನಷ್ಟುಸಾಧನೆ ಮಾಡಲು ನೆರವಾಗಲಿದೆ. - ಕರಿಶ್ಮಾ, ಜಾವೆಲಿನ್ ಥ್ರೋ ಪಟು