Ironman Triathlon: ಟ್ರಯಾಥ್ಲಾನ್ ಸಾಧಿಸಿದ ಕನ್ನಡಿಗ ಶ್ರೇಯಸ್ ಹೊಸೂರು
* ಐರನ್‌ಮ್ಯಾನ್ ಟ್ರಯಾಥ್ಲಾನ್ ಪೂರ್ಣಗೊಳಿಸಿ ದಾಖಲೆ ಬರೆದ ಶ್ರೇಯಸ್ ಹೊಸೂರು
* ಶ್ರೇಯಸ್ ಹೊಸೂರು ಕರ್ನಾಟಕ ಮೂಲದ ಐಆರ್‌ಎಎಸ್ ಅಧಿಕಾರಿ
* ಟ್ರಯಾಥ್ಲಾನ್ ವಿಶ್ವದಲ್ಲೇ ಒಂದು ದಿನದ ಅತ್ಯಂತ ಕಠಿಣ ಸ್ಪರ್ಧೆ ಎನಿಸಿಕೊಂಡಿದೆ
ನವದೆಹಲಿ(ಜೂ.08): ಕರ್ನಾಟಕ ಮೂಲದ ಐಆರ್‌ಎಎಸ್ ಅಧಿಕಾರಿ ಶ್ರೇಯಸ್ ಹೊಸೂರು ಅವರು ಐರನ್‌ಮ್ಯಾನ್ ಟ್ರಯಾಥ್ಲಾನ್ (Ironman Triathlon) ಪೂರ್ಣಗೊಳಿಸಿದ ಮೊದಲ ಭಾರತೀಯ ರೈಲ್ವೇ ಅಧಿಕಾರಿ ಎನಿಸಿಕೊಂಡಿದ್ದಾರೆ. ಅಲ್ಲದೇ ‘ಐರನ್‌ಮ್ಯಾನ್’ ಎಂಬ ಗೌರವ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಭಾನುವಾರ ಜರ್ಮನಿಯ ಹಂಬರ್ಗ್‌ನಲ್ಲಿ ನಡೆದ ಅತ್ಯಂತ ಕಠಿಣ ಎನಿಸಿಕೊಂಡಿರುವ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದರು. ಈಜು, ಸೈಕ್ಲಿಂಗ್ ಹಾಗೂ ಮ್ಯಾರಥಾನ್ ಒಳಗೊಂಡ ಈ ಸ್ಪರ್ಧೆಯನ್ನು ಅವರು 13 ಗಂಟೆ 26 ನಿಮಿಷಗಳಲ್ಲಿ ಗುರಿ ತಲುಪಿದರು. ಹಂಬಗ್‌ರ್ ಸರೋವರದಲ್ಲಿ ಬೆಳಗ್ಗೆ 6.30ಕ್ಕೆ ಈಜು ಆರಂಭಿಸಿದ ಅವರು, ಬಳಿಕ ಸೈಕ್ಲಿಂಗ್ ಹಾಗೂ ಮ್ಯಾರಥಾನ್ ಓಟ ಪೂರ್ತಿಗೊಳಿಸಿದರು.
ಶ್ರೇಯಸ್ ಅವರು 2012ರ ಸಾಲಿನ ಭಾರತೀಯ ರೈಲ್ವೇಯ (Indian Railway) ಅಕೌಂಟ್ಸ್ ಸರ್ವಿಸಸ್ ಅಧಿಕಾರಿಯಾಗಿದ್ದು, ಸದ್ಯ ನೈರುತ್ಯ ರೈಲ್ವೇಯ ಬೆಂಗಳೂರು ವಿಭಾಗಿಯ ಕಚೇರಿಯಲ್ಲಿ ಉಪ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಯಾಥ್ಲಾನ್ ಪೂರ್ಣಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ನನ್ನ ಈ ಸಣ್ಣ ಸಾಧನೆಯನ್ನು ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಚಸಿಸುತ್ತಿರುವ ‘ಆಜಾದಿ ಕಾ ಅಮೃತ ಮಹತ್ಸವ’ ಅಭಿಯಾನಕ್ಕೆ ಸಮರ್ಪಿಸುತ್ತಿದ್ದೇನೆ’ ಎಂದಿದ್ದಾರೆ.
ಏನಿದು ಟ್ರಯಾಥ್ಲಾನ್ ?
ಟ್ರಯಾಥ್ಲಾನ್ ವಿಶ್ವದಲ್ಲೇ ಒಂದು ದಿನದ ಅತ್ಯಂತ ಕಠಿಣ ಸ್ಪರ್ಧೆ ಎನಿಸಿಕೊಂಡಿದ್ದು, ಇದರಲ್ಲಿ 3.8 ಕಿ.ಮೀ. ಈಜು, 180 ಕಿ.ಮೀ. ಸೈಕ್ಲಿಂಗ್ ಹಾಗೂ 42.2 ಕಿ.ಮೀ. ಮ್ಯಾರಥನ್ ಓಟ ಒಳಗೊಂಡಿದೆ. ಇದನ್ನು ಪೂರ್ತಿಗೊಳಿಸಿದವರು ಐರನ್‌ಮ್ಯಾನ್ ಎಂಬ ಹೆಸರನ್ನು ಪಡೆಯಲಿದ್ದಾರೆ.
ಗೋಪಾಲ್ ಹೊಸೂರು ಪುತ್ರ
ಶ್ರೇಯಸ್ ಅವರು ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಅವರ ಪುತ್ರ. ಗೋಪಾಲ್ 1980ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕಾಡುಗಳ್ಳ ವೀರಪ್ಪನ್ ಅವರನ್ನು ಬಂಧಿಸಿದ ತಂಡದಲ್ಲಿದ್ದರು. ಅವರು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದು, ನಕ್ಸಲ್ ನಿಗ್ರಹ ಘಟಕದ ಮುಖ್ಯಸ್ಥರಾಗಿದ್ದರು.
ಅಸಭ್ಯ ವರ್ತನೆ: ಸೈಕ್ಲಿಸ್ಟ್ ಕೋಚ್ ವಿರುದ್ಧ ದೂರು
ನವದೆಹಲಿ: ವಿದೇಶದಲ್ಲಿ ತರಬೇತಿಗೆ ತೆರಳಿದ್ದ ವೇಳೆ ರಾಷ್ಟ್ರೀಯ ತಂಡದ ಕೋಚ್ ಆರ್.ಕೆ. ಶರ್ಮಾ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸೈಕ್ಲಿಸ್ಟ್ ಪಟು ಮಯೂರಿ ಲೂಟೆ ಭಾರತೀಯ ಸೈಕ್ಲಿಂಗ್ ಫೆಡರೇಷನ್‌ಗೆ (ಸಿಎಫ್‌ಐ) ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಮತ್ತು ಸಿಎಫ್‌ಐ ತನಿಖೆಗೆ ಸಮಿತಿಯನ್ನು ನೇಮಿಸಿದೆ.
Garuda Aerospace: ಅನ್ನದಾತರ ಬೆನ್ನಿಗೆ ನಿಂತ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ..!
ಈ ಬಗ್ಗೆ ಮಾಹಿತಿ ನೀಡಿದ ಸಾಯ್, ‘ಸ್ಲೊವೇನಿಯಾದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಕೋಚ್ ಶರ್ಮಾ ಅವರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳಾ ಸೈಕ್ಲಿಸ್ಟ್ ದೂರು ನೀಡಿದ್ದಾರೆ’ ಎಂದಿದೆ. ಶರ್ಮಾರನ್ನು ಸಿಎಫ್‌ಐ ಶಿಫಾರಸಿನಂತೆ ಕೋಚ್ ಅಗಿ ನೇಮಿಸಲಾಗಿತ್ತು ಎಂದು ಸಾಯ್ ಹೇಳಿಕೆ ನೀಡಿದೆ.