ಗೋವಿಂದರಾಜು ಏಷ್ಯಾ ಬಾಸ್ಕೆಟ್‌ಬಾಲ್ ಅಧ್ಯಕ್ಷ; ಈ ಹುದ್ದೆಗೇರಿದ ಮೊದಲ ಭಾರತೀಯ
ಕನ್ನಡಿಗ ಗೋವಿಂದರಾಜು ಅವರಿಗೆ ಒಲಿದ ಮಹತ್ವದ ಹುದ್ದೆ
ಫಿಭಾ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಭಿನಂದನೆ
ಕೌಲಾಲಂಪುರ(ಮೇ.24): ಏಷ್ಯಾ ಬಾಸ್ಕೆಟ್‌ಬಾಲ್‌ನ ನೂತನ ಅಧ್ಯಕ್ಷರಾಗಿ ಡಾ ಕೆ.ಗೋವಿಂದರಾಜು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಇಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಗೋವಿಂದರಾಜು ಸೇರಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಹುದ್ದೆಗೇರಿದ ಭಾರತದ ಮೊದಲ ವ್ಯಕ್ತಿ ಎನ್ನುವ ಹಿರಿಮೆಗೆ ಗೋವಿಂದರಾಜು ಅವರು ಪಾತ್ರರಾಗಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಫಿಬಾ ಅಧ್ಯಕ್ಷ ಹುದ್ದೆಗೆ ಗೋವಿಂದರಾಜು ಅವರ ಹೆಸರು ನಾಮನಿರ್ದೇಶನಗೊಂಡಿತ್ತು. ಕತಾರ್‌ನ ಶೇಕ್ ಸೌದ್ ಅಲಿ ಅವರಿಂದ ತೆರವಾದ ಹುದ್ದೆಯನ್ನು ಕನ್ನಡಿಗ ಗೋವಿಂದರಾಜು ಅಲಂಕರಿಸಿದ್ದಾರೆ. ಫಿಬಾ ಏಷ್ಯಾದಡಿ 45 ಸದಸ್ಯ ರಾಷ್ಟ್ರಗಳ ಫೆಡರೇಶನ್‌ಗಳಿವೆ.
ರಾಜ್ಯಕ್ಕೆ ಹೆಮ್ಮೆ: ಸಿದ್ದರಾಮಯ್ಯ
ಗೋವಿಂದರಾಜು ಅವರು ಫಿಬಾ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದು, ಕನ್ನಡಿಗರೊಬ್ಬರು ಈ ಹುದ್ದೆಗೇರಿರುವುದು ರಾಜ್ಯಕ್ಕೆ ಹೆಮ್ಮೆ ಎಂದಿದ್ದಾರೆ. ಟ್ವೀಟರ್‌ನಲ್ಲಿ ಸಿದ್ದರಾಮಯ್ಯ ಅವರು ಗೋವಿಂದರಾಜು ಅವರನ್ನು ಅಭಿನಂದಿಸಿದ್ದಾರೆ.
ಮೇ 26ರಿಂದ ರಾಜ್ಯ ಚೆಸ್ ಚಾಂಪಿಯನ್‌ಶಿಪ್
ಬೆಂಗಳೂರು: ಮೇ 26ರಿಂದ 30ರ ವರೆಗೂ ಬೆಂಗಳೂರಲ್ಲಿ ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್‌ಶಿಪ್ ನಡೆಯಲಿದ್ದು, ರಾಜ್ಯದ ಗ್ರ್ಯಾಂಡ್ ಮಾಸ್ಟರ್ಸ್, ಅಂತಾರಾಷ್ಟ್ರೀಯ ಮಾಸ್ಟರ್ಸ್‌ಗಳು ಸೇರಿ ನೂರಾರು ಚೆಸ್‌ಪಟುಗಳು ಭಾಗವಹಿಸಲಿದ್ದಾರೆ. ಕನಕಪುರ ರಸ್ತೆಯಲ್ಲಿರುವ ಫೋರಂ ಮಾಲ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.
ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಹೋರಾಟ ನ್ಯಾಯಯುತ: ನಟ ಕಿಶೋರ್ ಬೆಂಬಲ
ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆ(ಬಿಯುಡಿಸಿಎ) ಈ ಚಾಂಪಿಯನ್‌ಶಿಪ್ ಅನ್ನು ಆಯೋಜಿಸುತ್ತಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಬಿಯುಡಿಸಿಎ ಅಧ್ಯಕ್ಷೆ ಸೌಮ್ಯ ಎಂ.ಯು. ‘ಈ ಟೂರ್ನಿಯನ್ನು ಆಯೋಜಿಸಲು ಬಿಯುಡಿಸಿಎ ಉತ್ಸುಕಗೊಂಡಿದೆ. ಮುಂದಿನ ಪೀಳಿಗೆಯ ಚೆಸ್‌ಪಟುಗಳಿಗೆ ಈ ಟೂರ್ನಿಯು ವೇದಿಕೆ ಒದಗಿಸಲಿದೆ’ ಎಂದರು. ಅಂಡರ್-7,9, 11, 13, 15 ಬಾಲಕ, ಬಾಲಕಿಯರು ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. www.shorturl.at/aiz38 ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡುವ ಮೂಲಕ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ 08317426652 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಮಲೇಷ್ಯಾ ಮಾಸ್ಟರ್ಸ್: ಪ್ರಧಾನ ಸುತ್ತಿಗೆ ಅಶ್ಮಿತಾ
ಕೌಲಾಲಂಪುರ: ಭಾರತೀಯ ಶಟ್ಲರ್‌ಗಳಾದ ಅಶ್ಮಿತಾ ಛಲಿಹಾ ಹಾಗೂ ಮಾಳವಿಕಾ ಬನ್ಸೋದ್ ಇಲ್ಲಿ ಮಂಗಳವಾರ ಆರಂಭಗೊಂಡ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ವಿಶ್ವ ನಂ.42 ಮಾಳವಿಕ ಚೈನೀಸ್ ತೈಪೆಯ ಲಿನ್ ಹಿಸಿಯಾಂಗ್ ವಿರುದ್ಧ 21-12, 21-19 ಗೇಮ್‌ಗಳಲ್ಲಿ ಜಯಿಸಿದರೆ, ವಿಶ್ವ ನಂ.53 ಅಶ್ಮಿತಾ ಕೆನಡಾದ ವೆನ್ ಯು ಝಾಂಗ್ ವಿರುದ್ಧ 10-21, 21-19, 21-17ರಲ್ಲಿ ಜಯಿಸಿದರು. ಬುಧವಾರದಿಂದ ಪ್ರಧಾನ ಸುತ್ತು ಆರಂಭಗೊಳ್ಳಲಿದ್ದು ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕೆ.ಶ್ರೀಕಾಂತ್, ಲಕ್ಷ್ಯ ಸೇನ್ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.