ಇನ್ನು ಮೊದಲ ನಾಲ್ಕು ಸ್ಥಾನಗಳಲ್ಲಿ 4 ತಂಡಗಳ ನಾಯಕರೇ ಸ್ಥಾನ ಪಡೆಯುವ ಮೂಲಕ ಕ್ರಿಕೆಟ್ ಜಗತ್ತು ಹುಬ್ಬೇರುವಂತೆ ಮಾಡಿದ್ದಾರೆ. ಆಸೀಸ್, ಇಂಗ್ಲೆಂಡ್, ಇಂಡಿಯಾ ಹಾಗೂ ಕಿವೀಸ್ ತಂಡದ ನಾಯಕರು ಐಸಿಸಿ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ದುಬೈ(ಜ.10): ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಮೊದಲ ನಾಲ್ಕು ಸ್ಥಾನಗಳಲ್ಲಿ 4 ತಂಡಗಳ ನಾಯಕರೇ ಸ್ಥಾನ ಪಡೆಯುವ ಮೂಲಕ ಕ್ರಿಕೆಟ್ ಜಗತ್ತು ಹುಬ್ಬೇರುವಂತೆ ಮಾಡಿದ್ದಾರೆ. ಆಸೀಸ್, ಇಂಗ್ಲೆಂಡ್, ಇಂಡಿಯಾ ಹಾಗೂ ಕಿವೀಸ್ ತಂಡದ ನಾಯಕರು ಐಸಿಸಿ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ಆ್ಯಷಸ್ ಟೂರ್ನಿ ವೇಳೆ ಗಮರ್ನಾಹ ಪ್ರದರ್ಶನ ತೋರಿದ ಇಂಗ್ಲೆಂಡ್ ನಾಯಕ ಜೋ ರೂಟ್ 881 ಅಂಕದೊಂದಿಗೆ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರೆ, ವೃತ್ತಿಜೀವನದ ಅದ್ಭುತ ಫಾರ್ಮ್'ನಲ್ಲಿರುವ ಆಸೀಸ್ ನಾಯಕ ಸ್ಟೀವ್ ಸ್ಮಿತ್ 947 ರೇಟಿಂಗ್ ಅಂಕದೊಂದಿಗೆ ನಂ.1 ಸ್ಥಾನದಲ್ಲೇ ಭದ್ರವಾಗಿದ್ದಾರೆ. ಇನ್ನು ಆಫ್ರಿಕಾ ಟೆಸ್ಟ್'ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದ ಟೀಂ ಇಂಡಿಯಾ ನಾಯಕ ಕೊಹ್ಲಿ ಕೇವಲ 1 ಅಂಕ ಹಿನ್ನಡೆ ಅನುಭವಿಸಿದ್ದು 880 ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರ ಜೊತೆಗೆ 855 ಅಂಕ ಸಂಪಾದಿಸಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 4ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಭಾರತ ವಿರುದ್ಧ 5 ವಿಕೆಟ್ ಕಬಳಿಸಿದ ಆಫ್ರಿಕಾದ ವೇಗಿ ಕಗಿಸೊ ರಬಾಡ ಟೆಸ್ಟ್ ಬೌಲರ್'ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆ್ಯಂಡರ್'ಸನ್ ಹಾಗೂ ರವೀಂದ್ರ ಜಡೇಜಾ ನಂತರದ ಸ್ಥಾನದಲ್ಲಿದ್ದಾರೆ.
ಎರಡನೇ ಟೆಸ್ಟ್'ಗೆ ಧವನ್ ಬದಲು ರಾಹುಲ್?
ಮೊದಲ ಟೆಸ್ಟ್ ನಾಲ್ಕೇ ದಿನಕ್ಕೆ ಮುಕ್ತಾಯಗೊಂಡ ಬಳಿಕ, ಬುಧವಾರ ಬಹುತೇಕ ಭಾರತೀಯ ಆಟಗಾರರ ಹೋಟೆಲ್'ನಲ್ಲಿ ಉಳಿದರು. ಆದರೆ ಮೊದಲ ಟೆಸ್ಟ್'ನಲ್ಲಿ ಅವಕಾಶ ವಂಚಿತ ಕೆ.ಎಲ್.ರಾಹುಲ್ ಹಾಗೂ ಅಜಿಂಕ್ಯ ರಹಾನೆ, ನೆಟ್ಸ್‌ನಲ್ಲಿ ಹೆಚ್ಚು ಕಾಲ ಅಭ್ಯಾಸ ನಡೆಸಿದರು. ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್, ಇಬ್ಬರ ಅಭ್ಯಾಸಕ್ಕೆ ನೆರವಾದರು. ಮೂಲಗಳ ಪ್ರಕಾರ, ಸೆಂಚೂರಿಯನ್'ನಲ್ಲಿ ನಡೆಯಲಿರುವ 2ನೇ ಟೆಸ್ಟ್'ನಲ್ಲಿ ಧವನ್ ಬದಲು ರಾಹುಲ್, ರೋಹಿತ್ ಬದಲು ರಹಾನೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
