ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಮತ್ತು ಅಖಿಲ ಭಾರತ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವಾದ ಭಾನುವಾರ 97 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಮಹಾರಾಷ್ಟ್ರ, ಗೋವಾ ಮತ್ತು ಹರಿಯಾಣದಿಂದ ಕೆಲ ಆಟಗಾರರು ಬಂದಿದ್ದು ವಿಶೇಷವಾಗಿತ್ತು.

ಇನ್ನುಳಿದಂತೆ ರಾಜ್ಯದ ಆಟಗಾರರು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡರು. ತಲಾ 7 ಆಟಗಾರರಂತೆ 2 ತಂಡಗಳನ್ನು ರಚಿಸಿ ಆಟವನ್ನು ನಡೆಸಲಾಯಿತು. ಎಲ್ಲ ಆಟಗಾರರು ಉತ್ಸುಕತೆಯಿಂದ ಪಾಲ್ಗೊಂಡರು. ರೈಡಿಂಗ್, ಡಿಫೆಂಡಿಂಗ್‌'ನಲ್ಲಿ ಉತ್ತಮ ಕೌಶಲ್ಯ ಹೊಂದಿರುವ 15 ಆಟಗಾರರನ್ನು ಆಯ್ಕೆಮಾಡಲಾಯಿತು. ಈ ಆಟಗಾರರು ವಿವಿಧ ನಗರಗಳಲ್ಲಿ ಆಯ್ಕೆಯಾದ ಆಟಗಾರರೊಂದಿಗೆ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಆಯ್ಕೆಯಾಗುವವರಿಗೆ ಪ್ರೊ ಕಬಡ್ಡಿ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

8 ರೆಫ್ರಿಗಳ ಆಯ್ಕೆ: ನೂತನ ಕಬಡ್ಡಿ ರೆಫ್ರಿಗಳ ಆಯ್ಕೆಯನ್ನು ಸಹ ಭಾನುವಾರ ನಡೆಸಲಾಯಿತು.ವಿವಿಧ ರಾಜ್ಯಗಳಿಂದ ಬಂದಿದ್ದ 20 ರೆಫ್ರಿಗಳ ಪೈಕಿ 8 ರೆಫ್ರಿಗಳನ್ನು ಆಯ್ಕೆ ಮಾಡಲಾಗಿದೆ. ಇಂದೂ ಕೂಡ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇನ್ನು ಹೆಚ್ಚಿನ ಆಟಗಾರರು ಮತ್ತು ರೆಫ್ರಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.