ಭಾರತೀಯ ಎದುರಾಳಿ ಬಿ.ಸಾಯಿ ಪ್ರಣೀತ್‌ ಜತೆ ಕ್ವಾರ್ಟರ್‌ ಫೈನಲ್‌'ನಲ್ಲಿ ಸೆಣೆಸಿದ ಶ್ರೀಕಾಂತ್‌, ಸಿಂಗಾಪುರ್‌ ಓಪನ್‌ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ಸಿಡ್ನಿ(ಜೂ.24): ಕಳೆದ ವಾರವಷ್ಟೇ ಇಂಡೋನೇಷ್ಯಾ ಓಪನ್‌ ಪ್ರಶಸ್ತಿ ಗೆದ್ದಿದ್ದ ಭಾರತದ ಕಿದಾಂಬಿ ಶ್ರೀಕಾಂತ್‌, ಆಸ್ಪ್ರೇಲಿಯಾ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌'ಗೆ ಲಗ್ಗೆಯಿಟ್ಟಿದ್ದಾರೆ. 
ಆದರೆ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೈನಾ ನೆಹ್ವಾಲ್‌ ಹಾಗೂ ಪಿ.ವಿ ಸಿಂಧು ಕ್ವಾರ್ಟರ್‌ ಫೈನಲ್‌'ನಲ್ಲಿ ಮುಗ್ಗರಿಸಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ಭಾರತೀಯ ಎದುರಾಳಿ ಬಿ.ಸಾಯಿ ಪ್ರಣೀತ್‌ ಜತೆ ಕ್ವಾರ್ಟರ್‌ ಫೈನಲ್‌'ನಲ್ಲಿ ಸೆಣೆಸಿದ ಶ್ರೀಕಾಂತ್‌, ಸಿಂಗಾಪುರ್‌ ಓಪನ್‌ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ಕೇವಲ 43 ನಿಮಿಷ ನಡೆದ ಕಾದಾಟದಲ್ಲಿ 25-23, 21-17 ನೇರ ಸೆಟ್'ಗಳಲ್ಲಿ ಪ್ರಣೀತ್ ಅವರನ್ನು ಮಣಿಸಿದರು.

ಇನ್ನು ಸೆಮಿಫೈನಲ್‌'ನಲ್ಲಿ ಶ್ರೀಕಾಂತ್‌, ಚೀನಾದ ಯುಕಿ ಶಿ ವಿರುದ್ಧ ಸೆಣಸಾಡಲಿದ್ದಾರೆ.

ಸಿಂಧು, ಸೈನಾಗೆನಿರಾಸೆ: ವಿಶ್ವದ ನಂ.1 ಆಟಗಾರ್ತಿ ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ ವಿರುದ್ಧ ಸೆಣಸಾಟದಲ್ಲಿ ಪಿ.ವಿ.ಸಿಂಧು ಸೋಲು ಕಂಡರೆ, ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌ ವಿಶ್ವದ 6ನೇ ಶ್ರೇಯಾಂಕಿತೆ ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ಸುನ್‌ ಯು ವಿರುದ್ಧ ಪರಾಭವಗೊಂಡರು.