ಕಂಠೀರವ ಕ್ರೀಡಾಂಗಣ ಬಂದ್?
ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಹೈ ಕೋರ್ಟ್ ಕಂಠೀರವ ಕ್ರೀಡಾಂಗಣ ಬಳಕೆಗೆ ಅವಕಾಶ ನಿರಾಕರಿಸಿದೆ.
ಬೆಂಗಳೂರು [ಜೂ.28] : ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪುಟ್ಬಾಲ್ ಪಂದ್ಯಗಳನ್ನು ನಡೆಸಲು ‘ಜಿಂದಾಲ್ ಸೌತ್‌ವೆಸ್ಟ್ ಬೆಂಗಳೂರು ಫುಟ್ಬಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿ’ಗೆ ಅನುಮತಿ ನೀಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಕ್ರೀಡಾಂಗಣ ಬಳಸಲು ಜಿಂದಾಲ್ ಕಂಪನಿಗೆ ನೀಡಿದ ಅನುಮತಿಯನ್ನು ನವೀಕರಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಸರ್ಕಾರದ ಆಸ್ತಿಯಾಗಿರುವ ಕ್ರೀಡಾಂಗಣವನ್ನು ಬಳಸಲು ಖಾಸಗಿ ಕಂಪನಿಗಳಿಗೆ ಹೇಗೆ ಅನುಮತಿ ನೀಡಿದ್ದೀರಿ? ಅನುಮತಿ ನೀಡಿಕೆ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆಯೇ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
ಖಾಸಗಿ ಕಂಪನಿಗೆ ಕ್ರೀಡಾಂಗಣ ಬಳಕೆಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕಂಠೀರವ ಕ್ರೀಡಾಂಗಣ ಬಳಕೆಗೆ ನೀಡಿರುವ ಅನುಮತಿ ನವೀಕರಣಕ್ಕೆ ಜಿಂದಾಲ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬಾರದು. ಕಾನೂನು ಪ್ರಕ್ರಿಯೆಯನ್ನು ಪಾಲಿಸದೇ ಕ್ರೀಡಾಂಗಣವನ್ನು ಖಾಸಗಿ ಕಂಪನಿಗಳು ಬಳಸುವುದಕ್ಕೆ ಅನುಮತಿ ನೀಡುವುದಿಲ್ಲ ಹಾಗೂ ಕ್ರೀಡಾಂಗಣ ಬಳಸಲು ಜಿಂದಾಲ್ ಕಂಪನಿಗೆ ನೀಡಿದ ಅನುಮತಿಯನ್ನು ನವೀಕರಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಸಲ್ಲಿಸುವಂತೆ ಗುರುವಾರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತು.
ಕ್ರೀಡಾಂಗಣವನ್ನು ಉಪಯೋಗಿಸಲು ಖಾಸಗಿ ಕಂಪನಿಗಳಿಗೆ ಅನುಮತಿ ನೀಡುವುದಾದರೆ, ಆ ಕುರಿತು ಅರ್ಜಿಗಳನ್ನು ಆಹ್ವಾನಿಸಿ ಸಾರ್ವಜನಿಕ ಪ್ರಕಟಣೆ ನೀಡಬೇಕು. ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಅನುಮತಿ ನೀಡಬೇಕಾಗುತ್ತದೆ. ಆಗ ಸದ್ಯ ಅನುಮತಿ ಪಡೆದಿರುವ ಜಿಂದಾಲ್ ಕಂಪನಿ ಸಹ ಅರ್ಜಿ ಸಲ್ಲಿಸಿ, ಇತರೆ ಅರ್ಜಿದಾರರೊಂದಿಗೆ ಸ್ಪರ್ಧಿಸಬಹುದು. ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮೌಖಿಕವಾಗಿ ಹೈಕೋರ್ಟ್ ನಿರ್ದೇಶಿಸಿತು.
2017ರ ಅಕ್ಟೋಬರ್‌ನಲ್ಲಿ ನಡೆದಿದ್ದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಪಂದ್ಯಾವಳಿಗಾಗಿ ಕಂಠೀರವ ಕ್ರೀಡಾಂಗಣ ಬಳಕೆಗೆ ಜೆಎಸ್‌ಡಬ್ಲ್ಯೂ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನೊಂದಿಗೆ ಸರ್ಕಾರ ಒಂದು ವರ್ಷದ ಮಟ್ಟಿಗೆ ಒಪ್ಪಂದ ಮಾಡಿಕೊಂಡಿತ್ತು. ನಂತರ ಅಲ್ಲಿನ ಸಿಂಥೆಟಿಕ್ ಟ್ರ್ಯಾಕ್‌ಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕ್ರೀಡಾಪಟುಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಆರೋಪಿ ಅರ್ಜುನ ಪ್ರಶಸ್ತಿ ವಿಜೇತರಾದ ಅಶ್ವಿನಿ ನಾಚಪ್ಪ ಸೇರಿದಂತೆ 17 ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರರು ಹಾಗೂ 33 ಮಂದಿ ಕ್ರೀಡಾಪಟುಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಗುರುವಾರ ಆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರಿ ವಕೀಲರಿಗೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಜಿಂದಾಲ್ ಕಂಪನಿ ಪರ ವಕೀಲರು, ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲು ಜಿಂದಾಲ್ ಕಂಪನಿ ಆರು ಕೋಟಿ ರು. ಖರ್ಚು ಮಾಡಿದೆ. ಫುಟ್ಬಾಲ್ ಪಂದ್ಯಾವಳಿ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಯಾವುದೇ ಕ್ರೀಡಾಪಟುವಾದರೂ ಕ್ರೀಡಾಂಗಣವನ್ನು ಬಳಸಬಹುದು. ಅದಕ್ಕೆ ಮುಕ್ತ ಅವಕಾಶವಿದೆ. ಅನುಮತಿ ನವೀಕರಣಕ್ಕೆ ಜಿಂದಾಲ್ ಕಂಪನಿಯು ಅರ್ಜಿ ಸಲ್ಲಿಸಿದ್ದು, ಅದನ್ನು ಸರ್ಕಾರ ಇನ್ನೂ ಪರಿಗಣಿಸಬೇಕಿದೆ. ಕ್ರೀಡಾಂಗಣ ಬಳಕೆಗೆ ಕಂಪನಿ ಸರ್ಕಾರಕ್ಕೆ ಹಣ ಪಾವತಿಸುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ರೀಡಾಂಗಣ ಸರ್ಕಾರದ ಆಸ್ತಿ. ನಿಮಗೆ ನೀಡಲಾದ ಅನುಮತಿ ನವೀಕರಣ ಆಗಿಲ್ಲ. ಅನುಮತಿಯಿಲ್ಲದೇ ಸರ್ಕಾರದ ಆಸ್ತಿಯನ್ನು ಉಪಯೋಗಿಸಲು ಅವಕಾಶವಿಲ್ಲ. ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ತಾತ್ಕಾಲಿಕವಾಗಿ ಮಾತ್ರ ನೀಡಬೇಕು ಎಂದು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳನ್ನು ನೀಡಿದೆ. ಸರ್ಕಾರವು ಮತ್ತೆ ಸಾರ್ವಜನಿಕವಾಗಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಲಿ. ಲೈಸೆನ್ಸ್ ಪಡೆಯುವವರು ನಿಮಗಿಂತ ಹೆಚ್ಚಿನ ಹಣವನ್ನು ಸರ್ಕಾರಕ್ಕೆ ಪಾವತಿಸಬಹುದು. ನೀವು ಬೇಕಾದರೂ ಲೈಸೆನ್ಸ್ ಪಡೆಯಲು ಇತರರೊಂದಿಗೆ ಸ್ಪರ್ಧಿಸಬಹುದು ಎಂದು ಹೇಳಿತು.