20 ವರ್ಷಗಳ WWE ವೃತ್ತಿಬದುಕಿಗೆ ಜಾನ್ ಸಿನಾ ವಿದಾಯ ಹೇಳುತ್ತಿದ್ದಾರೆ. ಡಿಸೆಂಬರ್ 13, 2025 ರಂದು ನಡೆಯಲಿರುವ ತಮ್ಮ ಕೊನೆಯ ಪಂದ್ಯದಲ್ಲಿ ಅವರು ಪ್ರಬಲ ಎದುರಾಳಿ ಗುಂಟರ್ ವಿರುದ್ಧ ಸೆಣಸಾಡಲಿದ್ದು, ಈ ಪಂದ್ಯವು ಅವರ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತದೆ.

ಬೆಂಗಳೂರು: ಸುಮಾರು 20 ವರ್ಷಕ್ಕೂ ಹೆಚ್ಚು ಕಾಲದಿಂದ WWE ರಿಂಗ್‌ನಲ್ಲಿ ಅಬ್ಬರಿಸಿ ಹಲವಾರು ರೆಸ್ಲಿಂಗ್ ವರ್ಲ್ಡ್‌ ಟೈಟಲ್ ಗೆದ್ದ ಕುಸ್ತಿಪಟು ಜಾನ್ ಸಿನಾ ಇದೀಗ ವೃತ್ತಿಪರ ಜೀವನದ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ ಕುಸ್ತಿ ಪಂದ್ಯವು ಡಿಸೆಂಬರ್ 13, 2025ರಂದು ಶನಿವಾರ ರಾತ್ರಿ ನಡೆಯಲಿದೆ.

ಈ ಪಂದ್ಯವು ಜಾನ್ ಸಿನಾ ಅವರ ವೃತ್ತಿಬದುಕಿನ ಉತ್ತುಂಗದ ಹಂತದಲ್ಲಿರುವಾಗಲೇ ನಿವೃತ್ತಿಗೆ ಸಜ್ಜಾಗಿರುವುದರಿಂದ, ಎಲ್ಲರ ಚಿತ್ತ ಈ ಹೈವೋಲ್ಟೇಜ್ ಕದನದ ಮೇಲೆ ನೆಟ್ಟಿದೆ. 17 ಬಾರಿಯ ವಿಶ್ವ ಚಾಂಪಿಯನ್ ಜಾನ್ ಸಿನಾ ಅವರ ಕಟ್ಟ ಕಡೆದ ಕುಸ್ತಿ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳಿಗೆ ಕೊನೆಯ ಅವಕಾಶ ಬಂದೊದಗಿದೆ. ಈಗ, ಎಲ್ಲವೂ ಒಂದು ಭಾವನಾತ್ಮಕ ಮುಖಾಮುಖಿಯ ಕಡೆಗೆ ವೇದಿಕೆ ಸಜ್ಜಾಗುತ್ತಿದೆ. ಅದು ಸಿನಾ ಅಖಾಡಕ್ಕೆ ಕೊನೆಯ ಹೆಜ್ಜೆಯಾಗಲಿದೆ.

ಎಲ್ಲಿ ಮತ್ತು ಯಾವಾಗ ಜಾನ್ ಸಿನಾ ಕೊನೆಯ ಮ್ಯಾಚ್?

ಜಾನ್ ಸಿನಾ ಡಿಸೆಂಬರ್ 13, 2025 ರಂದು ವಾಷಿಂಗ್ಟನ್, ಡಿ.ಸಿ.ಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಲಿದ್ದಾರೆ. ಸಮಯದ ವ್ಯತ್ಯಾಸದಿಂದಾಗಿ, ಭಾರತದ ಅಭಿಮಾನಿಗಳು ಡಿಸೆಂಬರ್ 14 ರಂದು ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲಿದ್ದಾರೆ. WWE ಯ 2025 ರ ಕಾರ್ಯಕ್ರಮದ ಭಾಗವಾಗಿ ಸ್ಯಾಟರ್ಡೇ ನೈಟ್ಸ್ ಮೇನ್ ಈವೆಂಟ್‌ನ ಈ ಆವೃತ್ತಿಯು ಐಕಾನ್ ಆಟಗಾರನ ಭಾವನಾತ್ಮಕ ಬೀಳ್ಕೊಡುಗೆಗೆ ಸಾಕ್ಷಿಯಾಗಲಿದೆ.

ಜಾನ್ ಸಿನಾ ಫೈನಲ್ ಮ್ಯಾಚ್ ಎಷ್ಟು ಗಂಟೆಗೆ ಆರಂಭವಾಗಲಿದೆ?

ಶನಿವಾರ ರಾತ್ರಿಯ ಮುಖ್ಯ ಕಾರ್ಯಕ್ರಮವು ಡಿಸೆಂಬರ್ 13 ರ ಶನಿವಾರ ರಾತ್ರಿ 8 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ. ಅಂದರೆ ಭಾರತೀಯ ಕಾಲಮಾನ ಡಿಸೆಂಬರ್ 14 ರ ಭಾನುವಾರ ಬೆಳಿಗ್ಗೆ 6:30 ಭಾರತದಲ್ಲಿ ಪ್ರಸಾರವಾಗಲಿದೆ.

ಜಾನ್ ಸಿನಾ ಕಾರ್ಯಕ್ರಮದ ಆರಂಭದಲ್ಲೇ ಕುಸ್ತಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಾನ್ ಸಿನಾ ವಿದಾಯದ ಪಂದ್ಯದ ಬಳಿಕ ಹೊಸ ಪೀಳಿಗೆಯ WWE ಪ್ರತಿಭೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು. ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಜಾನ್ ಸಿನಾ ಈ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಫೈನಲ್ ಪಂದ್ಯದಲ್ಲಿ ಜಾನ್ ಸಿನಾ ಎದುರಾಳಿ ಯಾರು?

WWE ಈಗಾಗಲೇ ಜಾನ್ ಸಿನಾ ಅವರ ಕೊನೆಯ ಎದುರಾಳಿ ಯಾರು ಎನ್ನುವುದನ್ನು ಖಚಿತಪಡಿಸಿದೆ. ಶನಿವಾರ ಜಾನ್ ಸಿನಾ, ಪ್ರಬಲ ಪ್ರತಿಸ್ಫರ್ದಿ ಗುಂಟರ್ ವಿರುದ್ದ ಸೆಣಸಾಡಲಿದ್ದಾರೆ. ಆಸ್ಟ್ರಿಯಾದ ಪವರ್‌ಹೌಸ್ ಆ ಸ್ಥಾನವನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ, ರಾ, ಸ್ಮ್ಯಾಕ್‌ಡೌನ್ ಮತ್ತು NXT ಯ ತಾರೆಯರನ್ನು ಒಳಗೊಂಡ 16 ಜನರ ಕ್ರಾಸ್-ಬ್ರಾಂಡ್ ಸ್ಪರ್ಧೆಯಾದ ದಿ ಲಾಸ್ಟ್ ಟೈಮ್ ಈಸ್ ನೌ ಟೂರ್ನಮೆಂಟ್ ಅನ್ನು ಗೆಲ್ಲುವ ಮೂಲಕ ಇದೀಗ ಜಾನ್ ಸಿನಾಗೆ ಸವಾಲೊಡ್ಡಲು ರೆಡಿಯಾಗಿದ್ದಾರೆ.

ಎಲ್ಲಿ ಜಾನ್ ಸಿನಾ ಫೈನಲ್ ಫೈಟ್ ಲೈವ್ ಸ್ಟ್ರೀಮ್ ವೀಕ್ಷಿಸಬಹುದು?

ಟಿವಿ ಚಾನೆಲ್‌ನಲ್ಲಿ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್(ಇಂಗ್ಲಿಶ್, ಹಿಂದಿ, ತಮಿಳು ಮತ್ತು ತೆಲುಗು)

ಲೈವ್ ಸ್ಟ್ರೀಮ್: ಸೋನಿ ಲಿವ್