ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರೂಟ್ ದಿನದಾಟದ ಕೊನೆಯ ಹಂತದಲ್ಲಿ ಔಟ್ ಆಗಿ ಕ್ರೀಸ್ ತೊರೆದರೆ, ರೂಟ್ ಜತೆಗೆ ನಾಲ್ಕನೇ ವಿಕೆಟ್‌ಗೆ 179 ರನ್‌ಗಳ ಅಮೋಘ ಜತೆಯಾಟವಾಡಿದ ಮೊಯೀನ್ ಅಲಿಯೊಂದಿಗೆ ಬೆನ್ ಸ್ಟೋಕ್ಸ್ 19 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.
ರಾಜ್'ಕೋಟ್(ನ.09): ಇತ್ತೀಚಿನ ನ್ಯೂಜಿಲೆಂಡ್, ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸ್ಪಿನ್ ಸುಳಿಯಲ್ಲಿ ಪ್ರವಾಸಿ ತಂಡವನ್ನು ಕಟ್ಟಿಹಾಕುತ್ತಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ ಪ್ರವಾಸಿ ಇಂಗ್ಲೆಂಡ್ ತಂಡ ದಿಟ್ಟ ಉತ್ತರವನ್ನೇ ನೀಡಿದೆ.
ಮೂರನೇ ಕ್ರಮಾಂಕಿತ ಆಟಗಾರ ಜೋ ರೂಟ್ (124: 180 ಎಸೆತ, 11 ಬೌಂಡರಿ, 1 ಸಿಕ್ಸರ್) ದಾಖಲಿಸಿದ ಸೊಗಸಾದ ಶತಕವಲ್ಲದೆ, ಆಲ್ರೌಂಡರ್ ಮೊಯೀನ್ ಅಲಿ (99: 192 ಎಸೆತ, 9 ಬೌಂಡರಿ)ಯ ಅಜೇಯ ಆಟವು ಆತಿಥೇಯರನ್ನು ಹೈರಾಣಾಗಿಸಿದ ಫಲವಾಗಿ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಲಸ್ಟೈರ್ ಕುಕ್ ಪಡೆ ಮೊದಲ ದಿನದಾಟದ ಅಂತ್ಯಕ್ಕೆ 93 ಓವರ್ಗಳಲ್ಲಿ 4 ವಿಕೆಟ್ಗೆ 311 ರನ್ ಗಳಿಸಿ ಮೇಲುಗೈ ಸಾಧಿಸಿತು.
ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರೂಟ್ ದಿನದಾಟದ ಕೊನೆಯ ಹಂತದಲ್ಲಿ ಔಟ್ ಆಗಿ ಕ್ರೀಸ್ ತೊರೆದರೆ, ರೂಟ್ ಜತೆಗೆ ನಾಲ್ಕನೇ ವಿಕೆಟ್ಗೆ 179 ರನ್ಗಳ ಅಮೋಘ ಜತೆಯಾಟವಾಡಿದ ಮೊಯೀನ್ ಅಲಿಯೊಂದಿಗೆ ಬೆನ್ ಸ್ಟೋಕ್ಸ್ 19 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದಿದ್ದಾರೆ. ಎರಡನೇ ದಿನದಾಟದ ಮೊದಲ ಅವಧಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದೇ ಆದಲ್ಲಿ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಭಾರತದ ಬೌಲರ್ಗಳಿಗೆ ಅದರಲ್ಲೂ ಸ್ಪಿನ್ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಅಗ್ನಿಪರೀಕ್ಷೆ ಎದುರಾಗಿದೆ.
ಕೈಕೊಟ್ಟ ಟಾಸ್-ಕೈಬಿಟ್ಟ ಕ್ಯಾಚ್
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕುಕ್ ಟಾಸ್ ಗೆಲ್ಲುತ್ತಲೇ ಕೊಹ್ಲಿ ಮುಖ ಕಪ್ಪಿಟ್ಟಿತು. ಇತ್ತೀಚಿನ ನ್ಯೂಜಿಲೆಂಡ್ ವಿರುದ್ಧದ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ಭಾರತಕ್ಕೆ ಈ ಬಾರಿ ಕುಕ್ ಆಘಾತ ನೀಡಿದರು. ಟಾಸ್ ಗೆಲ್ಲುತ್ತಲೇ ಹೆಚ್ಚು ಚಿಂತಿಸದೆ ಒಡನೆಯೇ ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಕುಕ್ ಲಗುಬಗೆಯೊಂದಿಗೆ ಜತೆಯಾಟಗಾರ ಹಸೀಬ್ ಹಮೀದ್ ಜತೆಗೆ ಬ್ಯಾಟಿಂಗ್'ಗಿಳಿದರು. ಭಾರತದ ಹಿನ್ನಡೆಗೆ ಮುನ್ನುಡಿ ಎಂಬಂತೆ ಮೊದಲ ಓವರ್ನಲ್ಲೇ ಗಲ್ಲಿಯಲ್ಲಿ ಅಜಿಂಕ್ಯ ರಹಾನೆ ಕೈಬಿಟ್ಟ ಕ್ಯಾಚ್ನಿಂದ ಕುಕ್ ಜೀವದಾನ ಪಡೆದರೆ, ಮರು ಓವರ್ನಲ್ಲಿ ಮುರಳಿ ವಿಜಯ್ ಎಸಗಿದ ಫೀಲ್ಡಿಂಗ್ ಪ್ರಮಾದ 1949ರ ನಂತರ ಹತ್ತೊಂಭತ್ತು ವರ್ಷದ ಆಟಗಾರನಾಗಿ ಆರಂಭಿಕನ ಸ್ಥಾನ ತುಂಬಿದ ಅತ್ಯಂತ ಕಿರಿಯ ಆಟಗಾರ ಎಂದು ದಾಖಲೆ ಬರೆದ ಬೋಲ್ಟನ್ ಮೂಲದ, ಮುಂಬೈನಲ್ಲಿ ತರಬೇತಿ ಪಡೆದ ಯುವ ಆಟಗಾರ ಹಸೀಬ್ ಹಮೀದ್ ಎರಡಂಕಿ ದಾಟಲು ಆಸ್ಪದ ಕಲ್ಪಿಸಿತು. ಹೀಗಾಗಿ ಈ ಜೋಡಿ ದಿನದಾಟದ ಮೊದಲ ತಾಸಿನಲ್ಲಿ ತಂಡ ಯಾವುದೇ ತೊಂದರೆಗೆ ಸಿಲುಕದಂತೆ ನೋಡಿಕೊಂಡಿತು. ಆದರೆ, ಡ್ರಿಂಕ್ಸ್ ವಿರಾಮದ ಬಳಿಕ ರವೀಂದ್ರ ಜಡೇಜಾ ಜಾದೂಗೆ ಸಿಲುಕಿದ ಕುಕ್, ಎಲ್ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಕುಕ್ 47 ಎಸೆತಗಳಲ್ಲಿ 2 ಬೌಂಡರಿ ಸೇರಿದ 21 ರನ್ ಗಳಿಸಿದರು. ಇನ್ನು ಆರಂಭಿಕನಾಗಿ ಭರವಸೆ ಮೂಡಿಸಿದ ಹಮೀದ್, ಅಶ್ವಿನ್ಗೆ ಬಲಿಯಾಗುವ ಮುನ್ನ 82 ಎಸೆತಗಳಲ್ಲಿ 6 ಆಕರ್ಷಕ ಬೌಂಡರಿ ಸೇರಿದಂತೆ 31 ರನ್ ಮಾಡಿ ಕ್ರೀಸ್ ತೊರೆದರು.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್
93 ಓವರ್ಗಳಲ್ಲಿ 4 ವಿಕೆಟ್ಗೆ 311
