* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ನೀರಜ್ ಚೋಪ್ರಾ* ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.13 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದ ನೀರಜ್* ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ಸತತ ಪರಿಶ್ರಮ ಹಾಕಿದ್ದ ಚೋಪ್ರಾ

ಬೆಂಗಳೂರು(ಜು.25): ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಇದೀಗ ಮತ್ತೊಮ್ಮೆ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ನೀರಜ್ ಚೋಪ್ರಾ, ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕೂಟ ಆರಂಭಕ್ಕೂ ಮುನ್ನವೇ ಪದಕದ ನಿರೀಕ್ಷೆ ಮೂಡಿಸಿದ್ದ 24 ವರ್ಷದ ನೀರಜ್ ಚೋಪ್ರಾ, ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

2021ರ ಆಗಸ್ಟ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ ನೀರಜ್‌ ಚೋಪ್ರಾ 4-5 ತಿಂಗಳು ಕ್ರೀಡೆಯಿಂದ ದೂರವಿದ್ದರು. ಅಭಿನಂದನಾ ಕಾರ‍್ಯಕ್ರಮಗಳು, ಜಾಹೀರಾತು ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದ ನೀರಜ್‌, ಈ ವರ್ಷದ ಆರಂಭದಲ್ಲಿ ಅಮೆರಿಕಕ್ಕೆ ತೆರಳಿ ಅಭ್ಯಾಸ ಶುರು ಮಾಡುವ ವೇಳೆ ನೀರಜ್‌ರ ದೇಹದ ತೂಕ 12ರಿಂದ 14 ಕೆ.ಜಿ. ಹೆಚ್ಚಿಗೆಯಾಗಿತ್ತು. ಆ ಸಮಯದಲ್ಲಿ ಅವರಿಗೆ 400 ಮೀ. ಟ್ರ್ಯಾಕ್‌ನಲ್ಲಿ ಒಮ್ಮೆಗೆ 2 ಸುತ್ತು ಓಡಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಅವರ ಫಿಸಿಯೋ ಇಶಾನ್‌ ತಿಳಿಸಿದ್ದಾರೆ.

ಬಳಿಕ ಡಯೆಟ್‌ ಶುರು ಮಾಡಿದ ನೀರಜ್‌ ಚೋಪ್ರಾ, ತಮ್ಮ ಆಹಾರದಿಂದ ಸಕ್ಕರೆಯನ್ನು ಕಡಿತಗೊಳಿಸಿದರು. ಕಾರ್ಬೋಹೈಡ್ರೇಟ್ಸ್‌ ಸೇವನೆ ಕಡಿಮೆ ಮಾಡಿ, ಹೆಚ್ಚು ಪ್ರೋಟೀನ್‌ವುಳ್ಳ ಆಹಾರಗಳನ್ನು ನೀಡಲಾಯಿತು. ಅವರ ದೇಹದ ಕೊಬ್ಬಿನ ಪ್ರಮಾಣವನ್ನು ಇಳಿಸಲಾಯಿತು. ಭಾರ ಎತ್ತುವುದನ್ನು ಆರಂಭಿಸಿದ ನೀರಜ್‌, ವಿಶೇಷ ಫಿಟ್ನೆಸ್‌ ಶಿಬಿರಗಳಲ್ಲಿ ಪಾಲ್ಗೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ನಿತ್ಯ 8ರಿಂದ 10 ಗಂಟೆಗಳ ಕಾಲ ನಿದ್ದೆ ಮಾಡಲು ಶುರು ಮಾಡಿದರು. ಇದರಿಂದ ಅವರ ದೇಹಕ್ಕೆ ಅಗತ್ಯವಿದ್ದ ವಿಶ್ರಾಂತಿ ದೊರೆಯಿತು ಎಂದು ಇಶಾನ್‌ ವಿವರಿಸಿದ್ದಾರೆ.

Neeraj Chopra: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್

ನೀರಜ್‌ ಗ್ರಾಮದಲ್ಲಿ ಸಂಭ್ರಮಾಚರಣೆ

ಅಮೆರಿಕದ ಯುಜೀನ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಬೆಳ್ಳಿ ಗೆದ್ದ ಸುದ್ದಿ ಸಿಕ್ಕ ಕೂಡಲೇ ನೀರಜ್‌ರ ತವರೂರು, ಹರಾರ‍ಯಣದ ಪಾಣಿಪತ್‌ ಜಿಲ್ಲೆಯ ಖಾಂಡ್ರ ಗ್ರಾಮದಲ್ಲಿ ಭಾರೀ ಸಂಭ್ರಮಾಚರಣೆ ನಡೆಯಿತು. ಗ್ರಾಮದ ಮಹಿಳೆಯರು ಹಾಡು ಹಾಡುತ್ತಾ ಕುಣಿಯುತ್ತಾ ಸಂಭ್ರಮಿಸಿದರೆ, ನೀರಜ್‌ ಪೋಷಕರು ಗ್ರಾಮಸ್ಥರಿಗೆ ಸಿಹಿ ತಿಂಡಿಗಳನ್ನು ಹಂಚಿ ಖುಷಿ ಪಟ್ಟರು.

ಮುಂದಿನ ಬಾರಿ ಚಿನ್ನ ಗೆದ್ದೇ ಗೆಲ್ಲುವೆ

Scroll to load tweet…

ವಿಶ್ವ ಅಥ್ಲೆಟಿಕ್ಸ್‌ ಫೈನಲ್‌ ಒಲಿಂಪಿಕ್ಸ್‌ಗಿಂತ ಕಠಿಣವಾಗಿತ್ತು. ಎದುರಿನಿಂದ ಗಾಳಿ ಬೀಸುತ್ತಿದ್ದ ಕಾರಣ ಮೊದಲ 3 ಯತ್ನಗಳಲ್ಲಿ ನಿರೀಕ್ಷಿತ ದೂರ ತಲುಪಲು ಆಗಲಿಲ್ಲ. ಬಲಿಷ್ಠರನ್ನು ಹಿಂದಿಕ್ಕಿ, 19 ವರ್ಷ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟಿದ್ದಕ್ಕೆ ಬಹಳ ಸಂತೋಷವಾಗಿದೆ. ಮುಂದಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ. - ನೀರಜ್‌ ಚೋಪ್ರಾ