ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿ; ಮಿಯಾಂದಾದ್ ಕಿಡಿ
2014ರಲ್ಲಿ ಬಿಸಿಸಿಐ ಹಾಗೂ ಪಿಸಿಬಿ ಕ್ರಿಕೆಟ್ ಮಂಡಳಿಗಳು ಉಭಯ ದೇಶಗಳ ನಡುವೆ 2015ರಿಂದ 2023ರವರೆಗೆ 6 ದ್ವಿಪಕ್ಷೀಯ ಸರಣಿ ಆಡಲು ಸಹಿಹಾಕಿದ್ದವು.
ಕರಾಚಿ(ಆ.06): ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದಾದರೆ, ಐಸಿಸಿ ಆಯೋಜಿಸುವ ಟೂರ್ನಿಗಳಲ್ಲೂ ಭಾರತದ ವಿರುದ್ಧ ಪಾಕಿಸ್ತಾನ ತಂಡ ಆಡುವುದು ಬೇಡ ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಹೇಳಿದ್ದಾರೆ.
‘ಭಾರತಕ್ಕೆ ತಿರುಗೇಟು ನೀಡಲು ಇದು ತಕ್ಕ ಸಮಯ. ಉಭಯ ದೇಶಗಳ ನಡುವೆ ಸರಣಿಯನ್ನಾಡಲು ಭಾರತಕ್ಕೆ ಆಸಕ್ತಿ ಇಲ್ಲ ಎಂದಾದರೆ ನಾವು ಸಹ ಅವರೊಂದಿಗೆ ಆಡುವುದು ಬೇಡ. ಐಸಿಸಿ ಆಯೋಜಿಸುವ ಎಲ್ಲಾ ಪಂದ್ಯಾವಳಿಯಲ್ಲೂ ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸೋಣ. ಇದರಿಂದ ಐಸಿಸಿಗೆ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಆಗ ಐಸಿಸಿಗೆ ನಮ್ಮ ಬೆಲೆ ಏನೆಂಬುದು ತಿಳಿಯುತ್ತದೆ. ಭಾರತದಂತೆ ನಮಗೂ ಬೆಲೆ ನೀಡುತ್ತದೆ’ ಎಂದಿದ್ದಾರೆ.
ಭಾರತಕ್ಕೆ ನಮ್ಮೊಂದಿಗೆ ಕ್ರಿಕೆಟ್ ಆಡಿ ಎಂದು ಬೇಡಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಭಾರತ ವಿರುದ್ಧದ ಸರಣಿಗಳನ್ನು ಬಹಿಷ್ಕರಿಸುವುದರಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ ಎಂದು ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.
2014ರಲ್ಲಿ ಬಿಸಿಸಿಐ ಹಾಗೂ ಪಿಸಿಬಿ ಕ್ರಿಕೆಟ್ ಮಂಡಳಿಗಳು ಉಭಯ ದೇಶಗಳ ನಡುವೆ 2015ರಿಂದ 2023ರವರೆಗೆ 6 ದ್ವಿಪಕ್ಷೀಯ ಸರಣಿ ಆಡಲು ಸಹಿಹಾಕಿದ್ದವು. ಆದರೆ ಆನಂತರ ಬಿಸಿಸಿಐ ಕೇಂದ್ರ ಸರ್ಕಾರದ ಅನುಮತಿಯಿಲ್ಲದೇ ದ್ವಿಪಕ್ಷಿಯ ಸರಣಿ ಆಡುವುದಿಲ್ಲ ಎಂದು ಹೇಳಿದೆ.