ಸೌಥಾಂಪ್ಟನ್‌[ಜೂ.04]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 2017ರ ಡಿಸೆಂಬರ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ ಮಾಡಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.

ಭಾನುವಾರ ವಿಶ್ವಕಪ್‌ ಪಂದ್ಯಗಳನ್ನು ಪ್ರಸಾರ ಮಾಡುತ್ತಿರುವ ವಾಹಿನಿಯ ನಿರೂಪಕರು ‘ನೀವು ಬೌಲಿಂಗ್‌ ಮಾಡುವುದನ್ನು ಏಕೆ ನಿಲ್ಲಿಸಿದ್ದೀರಿ’ ಎಂದು ಕೇಳಿದ್ದಕ್ಕೆ ಉತ್ತರಿಸಿದ ವಿರಾಟ್‌, ‘2017ರ ಶ್ರೀಲಂಕಾ ಪ್ರವಾಸದ ವೇಳೆ ಏಕದಿನ ಪಂದ್ಯವೊಂದರಲ್ಲಿ ನಾವು ಬಹುತೇಕ ಗೆಲುವು ಸಾಧಿಸಿದ್ದೆವು. ಆಗ ಧೋನಿಯನ್ನು ನಾನು ಬೌಲ್‌ ಮಾಡಲ ಎಂದು ಕೇಳಿದೆ. ನಾನು ಇನ್ನೇನು ಬೌಲಿಂಗ್‌ ಆರಂಭಿಸಬೇಕು. ಬೌಂಡರಿ ಗೆರೆ ಬಳಿ ಇದ್ದ ಜಸ್ಪ್ರೀತ್‌ ಬುಮ್ರಾ, ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ತಮಾಷೆ ಮಾಡಬಾರದು ಎಂದು ಕೂಗಿದರು. ನನ್ನ ಬೌಲಿಂಗ್‌ ಮೇಲೆ ನನಗೆ ನಂಬಿಕೆಯಿದೆ, ಆದರೆ ತಂಡಕ್ಕಿಲ್ಲ. ಬೆನ್ನು ನೋವಿನ ಸಮಸ್ಯೆ ಎದುರಾದ ಬಳಿಕ ನಾನು ಬೌಲ್‌ ಮಾಡುವುದನ್ನು ನಿಲ್ಲಿಸಿದೆ’ ಎಂದರು. 

ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್..!

ಕೊಹ್ಲಿ ನೆಟ್ಸ್‌ ಅಭ್ಯಾಸದ ವೇಳೆ ಈಗಲೂ ಬೌಲಿಂಗ್‌ ಮಾಡುತ್ತಾರೆ. ಏಕದಿನ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ತಲಾ 4 ವಿಕೆಟ್‌ ಕಿತ್ತಿರುವ ಕೊಹ್ಲಿ, ಟೆಸ್ಟ್‌ನಲ್ಲಿ 163 ಎಸೆತ ಎಸೆದಿದ್ದು ಇನ್ನೂ ವಿಕೆಟ್‌ ಖಾತೆ ತೆರೆದಿಲ್ಲ.