ಟೊಕಿಯೊ(ಸೆ.21): ಭಾರತದ ಯುವ ಸ್ಟಾರ್‌ ಶಟ್ಲರ್‌ ಕೆ. ಶ್ರೀಕಾಂತ್‌ ಮತ್ತು ಅಜಯ್‌ ಜಯರಾಮ್‌, ಜಪಾನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿದ್ದು, ಎರಡನೇ ಸುತ್ತು ಪ್ರವೇಶಿಸಿದರೆ, ಭಾರತದ ಮತ್ತೋರ್ವ ಆಟಗಾರ ಪರುಪಳ್ಳಿ ಕಶ್ಯಪ್‌ ತಮ್ಮದೇ ದೇಶದ ಆಟಗಾರನ ಎದುರು ಪರಾಜಿತರಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ಇಲ್ಲಿನ ಮೆಟ್ರೋಪಾಲಿಟಿನ್‌ ಜಿಮ್ನಾಷಿಯಂನ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ 2ನೇ ದಿನವಾದ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕೆ.ಶ್ರೀಕಾಂತ್‌ 14-21, 21-14, 23-21 ಗೇಮ್‌ಗಳಿಂದ ಕಶ್ಯಪ್‌ ವಿರುದ್ಧ ಗೆಲುವು ಸಾಧಿಸಿದರು. 1 ಗಂಟೆ 2 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್‌ ಪ್ರಭಾವಿ ಆಟ ಪ್ರದರ್ಶಿಸಿದರು. ರಿಯೊ ಒಲಿಂಪಿಕ್ಸ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದ ಶ್ರೀಕಾಂತ್‌ ಮುಂದಿನ ಸುತ್ತಿನಲ್ಲಿ ಅಜಯ್‌ ಜಯರಾಂ ಎದುರು ಸೆಣಸಲಿದ್ದಾರೆ. ಅಜಯ್‌ ಜಯರಾಂ 21-19, 23-21 ಗೇಮ್‌ಗಳಿಂದ ಇಂಡೋನೇಷ್ಯಾದ ಸೋನಿ ದ್ವಿ ಕುಂಕೊರೊ ಎದುರು ಗೆಲುವು ಸಾಧಿಸಿದರು. ಇನ್ನು ಎಚ್‌.ಎಸ್‌. ಪ್ರಣಯ್‌ 23-21, 19-21, 21-18 ಗೇಮ್‌ಗಳಿಂದ ಮಲೇಷಿಯಾದ ಇಸ್ಕಾಂದರ್‌ ಜುಲ್ಕರ್ನಿಯನ್‌ ಜೈನುದ್ದೀನ್‌ ವಿರುದ್ಧ ಜಯ ಪಡೆದರು.

ಪ್ರಣೀತ್‌ಗೆ ಸೋಲು: ಭಾರತದ ಯುವ ಆಟಗಾರ ಬಿ. ಸಾಯಿ ಪ್ರಣೀತ್‌, ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಜುಲೈನಲ್ಲಿ ನಡೆದಿದ್ದ ಕೆನಡಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಪ್ರಣೀತ್‌, ಈ ಟೂರ್ನಿಯ ಮೊದಲ ಪಂದ್ಯದಲ್ಲಿ 21-9, 21-23, 10-21 ಗೇಮ್‌ಗಳಿಂದ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್‌ ಎದುರು ಪರಾಭವ ಹೊಂದಿದರು.