ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ ಸಿಂಧು, ಸಾಯಿ ಪ್ರಣೀತ್ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಟೋಕಿಯೋ[ಜು.26]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧುಹಾಗೂ ಬಿ.ಸಾಯಿ ಪ್ರಣೀತ್‌, ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 5ನೇ ಶ್ರೇಯಾಂಕಿತೆ ಸಿಂಧು, ಶ್ರೇಯಾಂಕ ರಹಿತ ಜಪಾನ್‌ ಆಟಗಾರ್ತಿ ಅಯಾ ಒಹೊರಿ ವಿರುದ್ಧ 11-21, 21-10, 21-13 ಗೇಮ್‌ಗಳ ಪ್ರಯಾಸದ ಗೆಲುವು ಸಾಧಿಸಿದರು.

ಜಪಾನ್‌ ಓಪನ್‌: ಶ್ರೀಕಾಂತ್‌ ಔಟ್‌, ಸಿಂಧು 2ನೇ ಸುತ್ತಿಗೆ

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ, ಸಿಂಧು ಸೋಲಿನ ಭೀತಿಯಿಂದ ಪಾರಾದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧುಗೆ 4ನೇ ಶ್ರೇಯಾಂಕಿತೆ ಜಪಾನ್‌ ಅಕಾನೆ ಯಮಗುಚಿ ಎದುರಾಗಲಿದ್ದಾರೆ. ಕಳೆದ ವಾರವಷ್ಟೇ ಯಮಗುಚಿ ವಿರುದ್ಧ ಇಂಡೋನೇಷ್ಯಾ ಓಪನ್‌ ಫೈನಲ್‌ನಲ್ಲಿ ಸಿಂಧು ಸೋಲುಂಡಿದ್ದರು.

ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸಾಯಿ ಪ್ರಣೀತ್‌ ಸ್ಥಳೀಯ ಆಟಗಾರ ಕಂಟಾ ತ್ಸುನೆಯಾಮ ವಿರುದ್ಧ 21-13, 21-16 ಗೇಮ್‌ಗಳಲ್ಲಿ ಗೆಲುವು ಪಡೆದರು. ಅಂತಿಮ 8ರ ಸುತ್ತಿನಲ್ಲಿ ಪ್ರಣೀತ್‌ಗೆ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ಎದುರಾಗಲಿದ್ದಾರೆ.

ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಪ್ರಣಯ್‌, ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆ ವಿರುದ್ಧ 9-21, 15-21ರಲ್ಲಿ ಸೋಲುಂಡರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಜೋಡಿ ಸೋಲುಂಡು ಹೊರಬಿತ್ತು.