ವಾಸೀಂ ಜಾಫರ್(61*) ಅರ್ಧಶತಕ ಬಾರಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂದೋರ್(ಡಿ.30): ರಜನೀಶ್ ಗುರ್ಬಾನಿ ಹ್ಯಾಟ್ರಿಕ್ ಬೌಲಿಂಗ್ ಹಾಗೂ ವಾಸೀಂ ಜಾಫರ್ ದಿಟ್ಟ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ವಿರುದ್ಧ ವಿದರ್ಭ ದಿಟ್ಟ ತಿರುಗೇಟು ನೀಡಿದ್ದು ಎರಡನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿದ್ದು, ಇನ್ನು ಕೇವಲ 89 ರನ್'ಗಳ ಹಿನ್ನಡೆಯಲ್ಲಿದೆ.
ದೆಹಲಿ ತಂಡವನ್ನು 295 ರನ್'ಗಳಿಗೆ ಕಟ್ಟಿ ಹಾಕಿದ ವಿದರ್ಭ ಬ್ಯಾಟಿಂಗ್'ನಲ್ಲಿ ದಿಟ್ಟ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟ್ಸ್'ಮನ್'ಗಳಾದ ನಾಯಕ ಫೈಯಜ್ ಫಜಲ್ ಹಾಗೂ ಸಂಜಯ್ ರಾಮಸ್ವಾಮಿ ಮೊದಲ ವಿಕೆಟ್'ಗೆ 96 ರನ್ ಕಲೆಹಾಕಿದರು. ಸಂಜಯ್ 31 ಬಾರಿಸಿ ವಿಕೆಟ್ ಒಪ್ಪಿಸಿದರೆ, ಫಜಲ್ 67 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಕಳೆದ ಪಂದ್ಯದ ಹೀರೋ ಗಣೇಶ್ ಸತೀಶ್ ಕೇವಲ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ವಿದರ್ಭ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ವೇಳೆ ಜತೆಯಾದ ವಾಸೀಂ ಜಾಫರ್ ಹಾಗೂ ಅಪೂರ್ವ್ ವಾಂಖೇಡೆ ತಂಡದ ಮೊತ್ತವನ್ನು 200ರ ಗಡಿ ದಾಟುವಂತೆ ಮಾಡಿದರು.
ವಾಸೀಂ ಜಾಫರ್(61*) ಅರ್ಧಶತಕ ಬಾರಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಮೊದಲ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿದ್ದ ದೆಹಲಿಗೆ ಯುವ ವೇಗಿ ರಜ್ನೀಶ್ ಗುರ್ಬಾನಿ ಆಘಾತ ನೀಡಿದರು. ಇನ್ನಿಂಗ್ಸ್'ನ 101ನೇ ಓವರ್'ನ ಕೊನೆ ಎರಡು ಎಸೆತಗಳಲ್ಲಿ ವಿಕಾಸ್ ಮಿಶ್ರಾ ಹಾಗೂ ನಿತಿನ್ ಸೈನಿಯನ್ನು ಔಟ್ ಮಾಡಿದ ಗುರ್ಬಾನಿ, 103ನೇ ಓವರ್'ನ ಮೊದಲ ಎಸೆತದಲ್ಲಿ ಶತಕ ವೀರ ಧೃವ್ ಶೋರೆ ಅವರನ್ನು ಪೆವಿಲಿಯನ್‌ಗಟ್ಟಿ ಹ್ಯಾಟ್ರಿಕ್ ವಿಕೆಟ್ ಪೂರೈಸಿದರು.
ಸಂಕ್ಷಿಪ್ತ ಸ್ಕೋರ್:
ಡೆಲ್ಲಿ: 295/10
ಧೃವ್ ಶೋರೆ: 145
ರಜನೀಶ್ ಗುರ್ಬಾನಿ: 59/6
ವಿದರ್ಭ: 206/4
ಫೈಜ್ ಫಜಲ್: 67
ಆಕಾಶ್ ಸುದನ್: 53/2
(* ಎರಡನೇ ದಿನದಂತ್ಯಕ್ಕೆ)
