‘ಕುಸ್ತಿ ಸಂಸ್ಥೆ ಅಮಾನತುಗೊಂಡಿರುವ ಕಾರಣ ಇನ್ನು ಮುಂದೆ ಯಾವುದೇ ಕೂಟ ಆಯೋಜಿಸುವ ಅಧಿಕಾರವಿಲ್ಲ. ಕೂಟ ನಡೆಸಿದರೆ ಮಾನ್ಯತೆ ನೀಡುವುದಿಲ್ಲ. ಕುಸ್ತಿಪಟುಗಳಿಗೆ ಪ್ರಶಸ್ತಿ, ಪದಕ ಕೊಟ್ಟರೂ ಅದನ್ನು ನೇಮಕಾತಿಗಳಿಗೆ ಪರಿಗಣಿಸುವುದಿಲ್ಲ ಎಂದಿದ್ದು, ಸ್ವತಂತ್ರ ಸಮಿತಿಯೇ ಕೂಟಗಳನ್ನು ಆಯೋಜಿಸಲಿದೆ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ(ಜ.09): ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಷನ್‌ ಆಯೋಜಿಸುವ ಯಾವುದೇ ಕೂಟಗಳಿಗೆ ಮಾನ್ಯತೆ ಇಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಮಾನತಾಗಿರುವ ಸಂಸ್ಥೆಯ ಅಧ್ಯಕ್ಷ ಸಂಜಯ್‌ ಸಿಂಗ್‌ ಇತ್ತೀಚೆಗೆ ಸಚಿವಾಲಯಕ್ಕೆ ಸಡ್ಡು ಹೊಡೆದು, ಶೀಘ್ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುವುದಾಗಿ ಹೇಳಿದ್ದರು. 

ಈ ಕುರಿತು ನೋಟಿಸ್‌ ಜಾರಿ ಮಾಡಿರುವ ಸಚಿವಾಲಯ, ‘ಕುಸ್ತಿ ಸಂಸ್ಥೆ ಅಮಾನತುಗೊಂಡಿರುವ ಕಾರಣ ಇನ್ನು ಮುಂದೆ ಯಾವುದೇ ಕೂಟ ಆಯೋಜಿಸುವ ಅಧಿಕಾರವಿಲ್ಲ. ಕೂಟ ನಡೆಸಿದರೆ ಮಾನ್ಯತೆ ನೀಡುವುದಿಲ್ಲ. ಕುಸ್ತಿಪಟುಗಳಿಗೆ ಪ್ರಶಸ್ತಿ, ಪದಕ ಕೊಟ್ಟರೂ ಅದನ್ನು ನೇಮಕಾತಿಗಳಿಗೆ ಪರಿಗಣಿಸುವುದಿಲ್ಲ ಎಂದಿದ್ದು, ಸ್ವತಂತ್ರ ಸಮಿತಿಯೇ ಕೂಟಗಳನ್ನು ಆಯೋಜಿಸಲಿದೆ ಎಂದು ಸ್ಪಷ್ಟಪಡಿಸಿದೆ. 

ಅಲ್ಲದೆ, ಸಂಸ್ಥೆಯ ಹೆಸರು, ಲೋಗೋ, ಲೆಟರ್ ಹೆಡ್‌ ಕೂಡಾ ಬಳಸಬಾರದು ಎಂದು ಆದೇಶಿಸಿದೆ. ಇತ್ತೀಚೆಗಷ್ಟೇ ಸ್ವತಂತ್ರ ಸಮಿತಿಯು ಫೆ.2ರಿಂದ 5ರ ವರೆಗೆ ಜೈಪುರದಲ್ಲಿ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುವುದಾಗಿ ಘೋಷಿಸಿತ್ತು.

Pro Kabaddi League ಬೆಂಗಳೂರು ಬುಲ್ಸ್‌ ಕಮ್‌ಬ್ಯಾಕ್‌ಗೆ ಬೆಚ್ಚಿದ ಪಾಟ್ನಾ ಪೈರೇಟ್ಸ್‌

ಇಂದು ಅರ್ಜುನ, ಖೇಲ್‌ ರತ್ನ ಪ್ರಶಸ್ತಿಗಳ ಪ್ರದಾನ

ನವದೆಹಲಿ: 2023ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಲವು ಅಥ್ಲೀಟ್‌ಗಳಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ಕ್ರೀಡಾ ಸಾಧಕರ ಹೆಸರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತ್ತು. ತಾರಾ ಕ್ರಿಕೆಟಿಗ ಮೊಹಮದ್‌ ಶಮಿ ಸೇರಿದಂತೆ 26 ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅಜಯ್‌ ರೆಡ್ಡಿ(ಅಂಧರ ಕ್ರಿಕೆಟ್‌), ಓಜಸ್‌, ಅದಿತಿ ಸ್ವಾಮಿ (ಆರ್ಚರಿ), ಶೀತಲ್‌ ದೇವಿ(ಪ್ಯಾರಾ ಆರ್ಚರಿ), ಪಾರುಲ್‌ ಚೌಧರಿ, ಶ್ರೀಶಂಕರ್‌ ಮುರಳಿ (ಅಥ್ಲೆಟಿಕ್ಸ್‌), ಮೊಹಮದ್‌ ಹುಸ್ಮುದ್ದಿನ್‌ (ಬಾಕ್ಸಿಂಗ್‌), ಆರ್‌.ವೈಶಾಲಿ (ಚೆಸ್‌), ಅಂತಿಮ್‌ ಪಂಘಲ್‌ (ಕುಸ್ತಿ) ಕೂಡಾ ಮಂಗಳವಾರ ಅರ್ಜುನ ಪ್ರಶಸ್ತಿ ಪಡೆಯಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಪದೇ ಪದೇ ಫೇಲ್; ಡಬಲ್ ಸೆಂಚುರಿ ಬಾರಿಸಿ ಪೂಜಾರ ಕಮಾಲ್..!

ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ, ಶ್ರೇಷ್ಠ ಕೋಚ್‌ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಕಬಡ್ಡಿ ಕೋಚ್‌ ಬಾಸ್ಕರನ್‌ ಅವರು ರಾಷ್ಟ್ರಪತಿಯಿಂದ ಸ್ವೀಕರಿಸಲಿದ್ದಾರೆ.

ಮಂಡ್ಯ ಓಪನ್‌: ಫೈಸಲ್‌, ವಿಷ್ಣುವರ್ಧನ್‌, ಶಿವಾಂಕ್‌ ಪ್ರಧಾನ ಸುತ್ತಿಗೆ ಪ್ರವೇಶ

ಮಂಡ್ಯ: ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಂಡ್ಯ ಓಪನ್‌ ಅಂತಾರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಭಾರತದ ವಿಷ್ಣುವರ್ಧನ್‌, ಫೈಸಲ್‌ ಖಮರ್‌ ಹಾಗೂ ಶಿವಾಂಕ್‌ ಪ್ರಧಾನ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್‌ ಅರ್ಹತಾ ಹಂತದ 2ನೇ ಸುತ್ತಿನಲ್ಲಿ ವಿಷ್ಣುವರ್ಧನ್‌, ದ.ಕೊರಿಯಾದ ವೂಬಿನ್ ಶಿನ್‌ ವಿರುದ್ಧ 6-3, 6-7(5), 10-4 ಗೆಲುವು ಸಾಧಿಸಿದರೆ, ಫೈಸಲ್‌ ಆಸ್ಟ್ರೇಲಿಯಾದ ಜಿಯಾಂಗ್‌ ಡೊಂಗ್‌ ವಿರುದ್ಧ 6-4, 4-6, 10-5 ಅಂತರದಲ್ಲಿ ಗೆದ್ದರು.

ಇದೇ ವೇಳೆ ಶಿವಾಂಕ್‌ ಅವರು ಇಸ್ರೇಲ್‌ನ ಆ್ಯರೊನ್‌ ಕೊಹೆನ್‌ರನ್ನು 7-5, 3-6, 10-6 ಅಂತರದಲ್ಲಿ ಸೋಲಿಸಿದರು. ಇನ್ನು ರಂಜೀತ್‌ ವಿರಾಲಿ, ಕಬೀರ್‌ ಹ್ಯಾನ್ಸ್‌, ಮಧ್ವಿನ್ ಕಾಮತ್‌, ಆಸ್ಟ್ರೇಲಿಯಾದ ಮ್ಯಾಟ್‌ ಹ್ಯೂಲ್ಮ್‌, ನೆದರ್‌ಲೆಂಡ್ಸ್‌ನ ತೀಜ್ಮೆನ್‌ ಲೂಫ್‌ ಕೂಡಾ ಪ್ರಧಾನ ಸುತ್ತಿಗೇರಿದರು. ಮಂಗಳವಾರದಿಂದ ಪ್ರಧಾನ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿದ್ದು, ಜ.14ರಂದು ಫೈನಲ್‌ ನಡೆಯಲಿದೆ.