ಬೀಜಿಂಗ್(ಏ.28): ಭಾರತದ ಅಭಿಷೇಕ್ ವರ್ಮಾ, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಖಾತೆಯಲ್ಲಿ 3 ಚಿನ್ನ, 1 ಬೆಳ್ಳಿಯೊಂದಿಗೆ ಒಟ್ಟು 4 ಪದಕ ಇವೆ. ಪಟ್ಟಿಯಲ್ಲಿ ಭಾರತ ನಂ.1 ಸ್ಥಾನ ಪಡೆದಿದೆ. 

ಭಾನುವಾರ ಶೂಟಿಂಗ್ ವಿಶ್ವಕಪ್‌ನ ಕೊನೆಯ ದಿನವಾಗಿದೆ. ವಿಶ್ವಕಪ್ ಶೂಟಿಂಗ್'ನಲ್ಲಿ ಅಭಿಷೇಕ್‌ಗೆ ಇದು ಮೊದಲ ಚಿನ್ನದ ಪದಕವಾಗಿದೆ. ಶನಿವಾರ ನಡೆದ ಪುರುಷರ ಏರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ಅಭಿಷೇಕ್ 242.7 ಅಂಕಗಳಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. ವಕೀಲರಾದ ಬಳಿಕ ಶೂಟಿಂಗ್‌ನತ್ತವಾಲಿದ್ದ ಅಭಿಷೇಕ್, ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಫೈನಲ್‌ನಲ್ಲಿ ರಷ್ಯಾದ ಆರ್ಟೆಮ್ ಚೆರ್ನಾಸೊವ್ (240.4) ರನ್ನು ಹಿಂದಿಕ್ಕುವಲ್ಲಿ ಅಭಿಷೇಕ್ ಯಶಸ್ವಿಯಾದರು. ಚೆರ್ನಾಸೊವ್ ಬೆಳ್ಳಿ ಗೆದ್ದರೆ, ಕೊರಿಯಾದ ಸೆಂಗ್‌ವೊ ಹನ್ (220.0) ಕಂಚಿಗೆ ತೃಪ್ತಿಪಟ್ಟರು.

ಅಭಿಷೇಕ್ ವಿಶ್ವಕಪ್ ಶೂಟಿಂಗ್‌ನಲ್ಲಿ ಇದೇ ಮೊದಲ ಬಾರಿ ಫೈನಲ್‌ಗೇರಿದ್ದರು. ಚಿನ್ನದ ಸಾಧನೆ ಮೂಲಕ ಅಭಿಷೇಕ್ 2020ರ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ. ಈ ವರೆಗೂ ಭಾರತದ ಐವರು ಶೂಟರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲಾ, ಸೌರಭ್ ಚೌಧರಿ ಈಗಾಗಲೇ ಅರ್ಹತೆ ಪಡೆದಿರುವ ಶೂಟರ್‌ಗಳಾಗಿದ್ದಾರೆ.