ಬಾಸ್ಕೆಟ್‌ಬಾಲ್ ಬಿಟ್ಟು ಶೂಟರ್ ಆದ ದಿವ್ಯಾ; ದೇಶಕ್ಕೆ ಚಿನ್ನ ಗೆದ್ದ ರಾಜ್ಯದ ಪ್ರತಿಭೆ
ರಾಜ್ಯದ ದಿವ್ಯಾಗೆ ವಿಶ್ವಕಪ್ ಚಿನ್ನ
ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್
ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಸಾಧನೆ
ಬಾಕು(ಮೇ.12): ಈ ವರ್ಷದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಕರ್ನಾಟಕದ ದಿವ್ಯಾ ಟಿ.ಎಸ್. ಗೆದ್ದುಕೊಟ್ಟಿದ್ದಾರೆ. ಗುರುವಾರ ನಡೆದ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ದಿವ್ಯಾ ಹಾಗೂ ಸರಬ್‌ಜೋತ್ ಸಿಂಗ್, ಸರ್ಬಿಯಾದ ದಿಗ್ಗಜ ಶೂಟರ್‌ಗಳಾದ ದಮಿರ್ ಮಿಕೆವ್ ಹಾಗೂ ಜೊರಾನಾ ಅರುನೊವಿಚ್ ವಿರುದ್ಧ 16-14ರ ರೋಚಕ ಗೆಲುವು ಸಾಧಿಸಿದರು.
55 ತಂಡಗಳಿದ್ದ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 581 ಅಂಕ ಕಲೆಹಾಕಿದ ದಿವ್ಯಾ ಹಾಗೂ ಸರಬ್‌ಜೋತ್ ಮೊದಲ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶ ಪಡೆದರು. ಸರಬ್‌ಜೋತ್‌ಗೆ ಇದು 2ನೇ ವಿಶ್ವಕಪ್ ಪದಕ. ಅವರು ಮಾರ್ಚ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದರು. ದಿವ್ಯಾಗೆ ಇದು ವಿಶ್ವಕಪ್‌ನಲ್ಲಿ ಚೊಚ್ಚಲ ಪದಕ. ಈ ಜೋಡಿಯು ಕೈರೋ ಹಾಗೂ ಭೋಪಾಲ್‌ನಲ್ಲಿ ನಡೆದಿದ್ದ ಈ ಹಿಂದಿನ 2 ವಿಶ್ವಕಪ್ ಹಂತಗಳಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಬಾಸ್ಕೆಟ್‌ಬಾಲ್ ಬಿಟ್ಟು ಶೂಟರ್ ಆದ ದಿವ್ಯಾ!
ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿದ್ದ ದಿವ್ಯಾ 2016ರಲ್ಲಿ ಬಲಗೈ ಗಾಯಕ್ಕೆ ತುತ್ತಾಗಿ ಕ್ರೀಡೆಯಿಂದ ಹಲವು ದಿನಗಳ ಕಾಲ ದೂರ ಉಳಿಯಬೇಕಾಯಿತು. ಬಾಸ್ಕೆಟ್‌ಬಾಲ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಾಗ ಅವರ ಸಹೋದರನ ಸಲಹೆಯಂತೆ 2018ರಲ್ಲಿ ಶೂಟಿಂಗ್ ಆಯ್ಕೆ ಮಾಡಿಕೊಂಡರು. ಒಂದೊಂದೇ ಹಂತ ಮೇಲೇರಿದ ದಿವ್ಯಾ, ಕಳೆದ ವರ್ಷ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಕಳೆದ ವರ್ಷವೇ ಭಾರತ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಿದ್ದ ದಿವ್ಯಾ, ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರ ಹಣೆಗೆ 12 ಹೊಲಿಗೆ ಹಾಕಲಾಗಿತ್ತು. ದೃಷ್ಟಿ ಸಮಸ್ಯೆ ಇದ್ದರೂ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ತೋರಿದ್ದರು.
ವಿರಾಟ್ ಔಟಾಗಿದ್ದನ್ನು ಸಂಭ್ರಮಿಸಿದ ಆಫ್ಘಾನಿ ಕ್ರಿಕೆಟಿಗ ನವೀನ್ ಉಲ್-ಹಕ್..! ನೆಟ್ಟಿಗರ ಪ್ರತಿಕ್ರಿಯೆ ವೈರಲ್
ಈ ವರ್ಷ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ದಿವ್ಯಾಗೆ ಕೈರೋ ಹಾಗೂ ಭೋಪಾಲ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಪದಕ ಕೈತಪ್ಪಿತ್ತು. ಬೆಂಗಳೂರಿನ ಬೆಸ್ಟ್ ಶಾಟ್ ಶೂಟಿಂಗ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ದಿವ್ಯಾಗೆ, ಮಂಜುನಾಥ್ ಅವರು ಕೋಚ್ ಆಗಿದ್ದಾರೆ.
ವಿಶ್ವ ಬಾಕ್ಸಿಂಗ್: ಭಾರತಕ್ಕೆ ದಾಖಲೆಯ 3 ಪದಕ ಖಚಿತ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ದಾಖಲೆಯ ಮೂರು ಪದಕಗಳು ಖಚಿತವಾಗಿದ್ದು, ಒಂದೇ ಆವೃತ್ತಿಯಲ್ಲಿ ಮೊದಲ ಬಾರಿ 3 ಪದಕ ಗೆದ್ದ ಸಾಧನೆ ಮಾಡಿದೆ. ಬುಧವಾರ ನಿಶಾಂತ್ ದೇವ್, ಮೊಹಮದ್ ಹುಸ್ಮುದ್ದೀನ್ ಹಾಗೂ ದೀಪಕ್ ಭೋರಿಯಾ ಸೆಮಿಫೈನಲ್ ಪ್ರವೇಶಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ 51 ಕೆ.ಜಿ. ವಿಭಾಗದಲ್ಲಿ ದೀಪಕ್ ಕಜಕಸ್ತಾನದ ನುರ್ಝಿಗಿಟ್ ವಿರುದ್ಧ 5-0 ಅಂತರದಲ್ಲಿ ಗೆದ್ದರೆ, ಕಳೆದ ಬಾರಿಯ ಕಂಚು ವಿಜೇತ ಹುಸ್ಮುದ್ದೀನ್ 57 ಕೆ.ಜಿ. ವಿಭಾಗದಲ್ಲಿ ಬಲ್ಗೇರಿಯಾದ ಇಬಾನೆಜ್ರನ್ನು 4-3ರಿಂದ ಸೋಲಿಸಿದರು. 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ಕ್ಯೂಬಾದ ಟೆರ್ರಿ ಜಾಜ್‌ರ್ ವಿರುದ್ಧ ಗೆದ್ದು ಸೆಮೀಸ್ಗೇರಿದರು.
ಒಟ್ಟು 10 ಪದಕ: ಭಾರತೀಯರು ಕೂಟದಲ್ಲಿ ಈ ಬಾರಿಯ 3 ಸೇರಿ ಒಟ್ಟು 10 ಪದಕ ಗೆದ್ದಂತಾಗಿದೆ. 2009, 2011, 2015, 2017, 2021ರಲ್ಲಿ ತಲಾ 1, 2019ರಲ್ಲಿ 2 ಪದಕ ಗೆದ್ದಿದ್ದಾರೆ. 2019ರಲ್ಲಿ ಅಮಿತ್ ಪಂಘಾಲ್ ಏಕೈಕ ಬೆಳ್ಳಿ ಗೆದ್ದಿದ್ದು, ಉಳಿದ 6 ಪದಕಗಳೂ ಕಂಚು.