ಗುವಾಹಟಿ[ಮಾ.07]: ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಸತತ 2ನೇ ಬಾರಿಗೆ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫೈನಲ್‌ ಪ್ರವೇಶಿಸುವ ಉತ್ಸಾಹದಲ್ಲಿದೆ. 
ಗುರುವಾರ ಇಲ್ಲಿ ನಡೆಯಲಿರುವ 5ನೇ ಆವೃತ್ತಿಯ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ನಾರ್ಥ್’ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಎದುರಿಸಲಿರುವ ಬೆಂಗಳೂರು ತಂಡ, ಮಾ.11ರಂದು ಕಂಠೀರವ ಕ್ರೀಡಾಂಗಣದಲ್ಲಿ 2ನೇ ಚರಣವನ್ನು ಆಡಲಿದೆ.

ಲೀಗ್‌ ಹಂತದ ಜನವರಿ ವರೆಗೂ ಅಜೇಯವಾಗಿ ಉಳಿದಿದ್ದ ಬಿಎಫ್‌ಸಿ, ಕೊನೆಯಲ್ಲಿ ಲಯ ಕಳೆದುಕೊಂಡು ಸತತ 4 ಸೋಲುಗಳನ್ನು ಕಂಡಿತು. ಆದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು, ಪ್ಲೇ-ಆಫ್‌ಗೆ ಸಿದ್ಧಗೊಂಡಿತು. ಮತ್ತೊಂದೆಡೆ ನಾರ್ಥ್’ಈಸ್ಟ್‌ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದ್ದು, ಫೈನಲ್‌ಗೆ ಲಗ್ಗೆಯಿಡಲು ಎದುರು ನೋಡುತ್ತಿದೆ. 

ತಂಡ ಈ ಆವೃತ್ತಿಯಲ್ಲಿ ಶ್ರೇಷ್ಠ ಡಿಫೆನ್ಸ್‌ ಹೊಂದಿದ್ದು, ಲೀಗ್‌ ಹಂತದಲ್ಲಿ ಆಡಿದ 18 ಪಂದ್ಯಗಳಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 18 ಗೋಲುಗಳನ್ನು ಮಾತ್ರ. ಆದರೆ ಬಿಎಫ್‌ಸಿಯ ಗೋಲ್‌ ಮಷಿನ್‌ ಸುನಿಲ್‌ ಚೆಟ್ರಿಯ ಅಬ್ಬರವನ್ನು ತಡೆಯಲು ನಾರ್ಥ್’ಈಸ್ಟ್‌ ತಂಡ ಹೆಚ್ಚಿನ ಪರಿಶ್ರಮ ವಹಿಸಬೇಕಿದೆ. ಉದಾಂತ ಸಿಂಗ್‌, ಕ್ಸಿಸ್ಕೋ ಹೆರ್ನಾಂಡೆಜ್‌ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಎರಿಕ್‌ ಪಾರ್ತಲು ಗಾಯಗೊಂಡು ಹೊರಬಿದ್ದಿದ್ದು, ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.