ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್), ರೋಚಕ ಘಟ್ಟ ತಲುಪಿದೆ. ಸೋಮವಾರ ಸಂಜೆ ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ಸೆಮಿಫೈನಲ್ 2ನೇ ಚರಣದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಲೀಗ್‌ನಲ್ಲಿ ಈವರೆಗೂ ಉತ್ತಮ ಪ್ರದರ್ಶನ ತೋರಿ ಸೆಮಿಫೈನಲ್‌ಗೇರಿರುವ ಬಿಎಫ್‌ಸಿಗೆ ಇದು ಮಹತ್ವದ ಪಂದ್ಯವಾಗಿದ್ದು, ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಎದುರು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಗುವಾಹಟಿಯಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ನಾರ್ಥ್ ಈಸ್ಟ್ ವಿರುದ್ಧ 1-2 ಗೋಲುಗಳಿಂದ ಪರಾಭವಗೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಚೆಟ್ರಿ ಪಡೆ ಕನಿಷ್ಠ 2 ಗೋಲುಗಳ ಅಂತರದಲ್ಲಿ ಜಯಿಸಲೇಬೇಕಿದೆ. ಒಂದು ವೇಳೆ ಪಂದ್ಯದಲ್ಲಿ ಬಿಎಫ್‌ಸಿ ಡ್ರಾ ಸಾಧಿಸಿದರೂ ಫೈನಲ್‌ಗೇರಲು ಸಾಧ್ಯವಾಗುವುದಿಲ್ಲ.

ಕಂಠೀರವ ಕ್ರೀಡಾಂಗಣದಲ್ಲಿ ಮಿಕು ಮತ್ತು ಚೆಟ್ರಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಲ್ಲದೆ ಐಎಸ್‌ಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್‌ಗೇರಿರುವ ನಾರ್ಥ್ ಈಸ್ಟ್ ತಂಡ, ತವರಿನಲ್ಲೇ ಬಿಎಫ್‌ಸಿ ತಂಡವನ್ನು ಮಣಿಸಿ ಫೈನಲ್‌ಗೇರುವ ಉತ್ಸಾಹದಲ್ಲಿದೆ. ಟೂರ್ನಿಯುದ್ದಕ್ಕೂ ನಾರ್ಥ್ ಈಸ್ಟ್ ರಕ್ಷಣಾ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ. ಇದುವರೆಗೂ ಆಡಿರುವ ಪಂದ್ಯಗಳಲ್ಲಿ ನಾರ್ಥ್ ಈಸ್ಟ್ ಕೇವಲ 19 ಗೋಲುಗಳನ್ನು ಮಾತ್ರ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದೆ.