ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮಾಲೀಕ ಸಚಿನ್ ತೆಂಡೂಲ್ಕರ್ ನೀಡಿದ್ರು ಶಾಕ್!
ಐಎಸ್ಎಲ್ ಫುಟ್ಬಾಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ತಂಡಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಸಹ ಮಾಲೀಕ ಸಚಿನ್ ತೆಂಡೂಲ್ಕರ್ ಬಿಗ್ ಶಾಕ್ ನೀಡಿದ್ದಾರೆ.
ಮುಂಬೈ(ಸೆ.16): 5ನೇ ಆವೃತ್ತಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಆದರೆ ಟೂರ್ನಿ ಆರಂಭದಿಂದ ನಾಲ್ಕು ಆವೃತ್ತಿಗಳಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕನಾಗಿದ್ದ ಮಾಸ್ಟರ್ ಬ್ಲಾಸ್ಟರ್ಸ್ ಸಚಿನ್ ತೆಂಡೂಲ್ಕರ್ ಇದೀಗ ತಂಡದಿಂದ ಹೊರಬಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಜೊತೆ ಉದ್ಯಮಿ ನಿಮ್ಮಗಡ್ಡ ಪ್ರಸಾದ್, ನಟ ಅಲ್ಲು ಅರ್ಜುನ್, ನಾಗಾರ್ಜುನ್ ಹಾಗೂ ಚಿರಂಜೀವಿ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕರಾಗಿದ್ದಾರೆ. ಆದರೆ ಇದೀಗ ಸಚಿನ್ ತೆಂಡೂಲ್ಕರ್ ಸಹ ಮಾಲೀಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.
ತಂಡ ಹಾಗೂ ಫ್ರಾಂಚೈಸಿ ಮಾಲೀಕರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇನೆ. ಸದ್ಯ ತಂಡ ದೈತ್ಯವಾಗಿ ಬೆಳೆದಿದೆ. ನಾನು ತಂಡದಿಂದ ಹೊರಗುಳಿದರೂ, ನನ್ನ ಮನಸ್ಸು ಕೇರಳ ಬ್ಲಾಸ್ಟರ್ಸ್ ತಂಡಕ್ಕಾಗಿ ಮಿಡಿಯುತ್ತಿರುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ವೈಯುಕ್ತಿಕ ಕಾರಣದಿಂದ ತಂಡದ ಫ್ರಾಂಚೈಸಿ ಮಾಲೀಕತ್ವದಿಂದ ಹಿಂದೆ ಸರಿಯುತ್ತಿದ್ದೇನೆ. ಕೇರಳ ಜನರ ಪ್ರೀತಿ, ತಂಡದ ಅಭಿಮಾನಿಗಳು ಪ್ರೀತಿಗೆ ಚಿರಋಣಿ ಎಂದು ಸಚಿನ್ ಹೇಳಿದ್ದಾರೆ.