ಬೆಂಗಳೂರು(ಅ.05): ನಗ​ರದ ಫುಟ್ಬಾಲ್‌ ಪ್ರತಿ​ಭೆ​ ಇಶನ್‌ ಪಂಡಿತಾ, ಯೂರೋ​ಪಿನ ಪ್ರತಿ​ಷ್ಠಿತ ಲಾ ಲಿಗಾ ಫುಟ್ಬಾಲ್‌ ಕ್ಲಬ್‌ನ ಲೆಗಾನ್ಸ್‌ ತಂಡಕ್ಕೆ ಸೇರ್ಪ​ಡೆ​ಗೊಂಡಿ​ದ್ದಾರೆ. ಈ ಮೂಲಕ, ಲಾ ಲಿಗಾಗೆ ಲಗ್ಗೆ​ಯಿಟ್ಟಮೊಟ್ಟಮೊದಲ ಭಾರ​ತೀಯ ಆಟ​ಗಾ​ರ​ನೆಂಬ ಹೆಗ್ಗ​ಳಿ​ಕೆಗೆ ಭಾಜ​ನ​ರಾ​ಗಿ​ದ್ದಾರೆ. ಮುಂದಿನ ಒಂದು ವರ್ಷದ ಅವ​ಧಿ​ಯ​ವ​ರೆಗೆ ಲೆಗಾನ್ಸ್‌ ತಂಡ​ದಲ್ಲಿರುವ ಒಪ್ಪಂದಕ್ಕೆ ಸಹಿ ಹಾಕಿ​ದ್ದಾ​ರೆಂದು ‘ಇಂಡಿ​ಯನ್‌ ಎಕ್ಸ್‌​ಪ್ರೆಸ್‌’ ಹೇಳಿದೆ.

ಇತ್ತೀ​ಚೆಗೆ ನಡೆದ ಸರಳ ಸ್ವಾಗತ ಸಮಾ​ರಂಭ​ದಲ್ಲಿ ಕಾಶ್ಮೀರ ಮೂಲ​ದ​ ಇಶನ್‌ ಪಂಡಿತಾಗೆ 50ರ ಸಂಖ್ಯೆಯಲ್ಲಿ ಅಚ್ಚಾ​ಗಿ​ರುವ ಜೆರ್ಸಿ​ಯನ್ನು ನೀಡಿದ ಫ್ರಾಂಚೈ​ಸಿಯ ಉಪಾ​ಧ್ಯಕ್ಷ ಹಾಗೂ ಮಾಲೀಕ ಫೆಲಿಪೆ ಮೊರೆನೊ ಅವರು, ಆರಂಭ​ದಲ್ಲಿ ಪಂಡಿತಾ ಅವರು, ಲೆನಾಗ್ಸ್‌ ಕಿರಿಯರ ತಂಡ​ವಾದ ಲೆಗಾನ್ಸ್‌ ಬಿ ಪರ​ವಾಗಿ ಆಡ​ಲಿದ್ದು, ಅವರ ಪ್ರದರ್ಶನದ ಆಧಾರದಲ್ಲಿ ಹಿರಿಯರ ತಂಡ​ದಲ್ಲಿ ಆಡ​ಲಿ​ದ್ದಾ​ರೆಂದು ತಿಳಿ​ಸಿ​ದ್ದಾರೆ.

ಲೆಗಾನ್ಸ್‌ ತಂಡಕ್ಕೆ ಸೇರ್ಪ​ಡೆ​ಗೊಂಡಿ​ರು​ವು​ದರ ಬಗ್ಗೆ ಸಂತಸ ವ್ಯಕ್ತ​ಪ​ಡಿ​ಸಿ​ರುವ ಇಶನ್‌ ‘‘ಫುಟ್ಬಾಲ್‌ ಕ್ರೀಡೆ​ಯಲ್ಲಿ ಹೆಚ್ಚಿನ ಮಟ್ಟದ ತರ​ಬೇತಿ ಪಡೆ​ಯಲು ಮೂರು ವರ್ಷ​ಗಳ ಹಿಂದೆಯೇ ಸ್ಪೇನ್‌ಗೆ ಆಗ​ಮಿಸಿ ಕಠಿಣ ತರ​ಬೇತಿ ಪಡೆ​ದಿ​ದ್ದೇನೆ. ಆ ತಪ​ಸ್ಸಿಗೆ ಇಂದು ಫಲ ಸಿಕ್ಕಿ​ದೆ’’ ಎಂದು ತಿಳಿ​ಸಿ​ದ್ದಾರೆ.