ಭಾರತದ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸತತ 11 ಯಶಸ್ವಿ ಆವೃತ್ತಿಗಳನ್ನು ಪೂರೈಸಿರುವ ಹೊಡಿಬಡಿ ಆಟದ ಐಪಿಎಲ್, ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಇದೇ ಮಾರ್ಚ್ 23ರಂದು ಭಾರತೀಯರ ಮನೆ-ಮನಕ್ಕೆ ಲಗ್ಗೆಯಿಡಲು ಸಜ್ಜಾಗಿದೆ.

ಈ ಸಂದರ್ಭದಲ್ಲಿ ಕಳೆದ 11 ಆವೃತ್ತಿಯಲ್ಲಿ ಮಿಂಚಿದ, ಮಿಂಚುತ್ತಿರುವ ಹಾಗೂ ಮಿಂಚಿ ಮರೆಯಾದ ಆಟಗಾರರ ಸಾಧನೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುವ ವಿಭಿನ್ನ ಪ್ರಯತ್ನವನ್ನು ಮಾಡುತ್ತಿದೆ. 2008ರಲ್ಲಿ ಆರಂಭವಾದ ಐಪಿಎಲ್ ಯಶಸ್ವಿ 11 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಹೊಡಿಬಡಿ ಆಟಕ್ಕೆ ಹೆಸರಾದ ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಟಾಪ್ 10 ಪಟ್ಟಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಒಂದು ವಿಶೇಷವೆಂದರೆ ಈ ಟಾಪ್ 10 ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ 4 ಆಟಗಾರರು ಸ್ಥಾನ ಪಡೆದಿದ್ದಾರೆ.

1 ಸುರೇಶ್ ರೈನಾ: 4,985 ರನ್ (CSK&GL)


ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ಎಂದೇ ಗುರುತಿಸಿಕೊಂಡಿರುವ ಸುರೇಶ್ ರೈನಾ ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಕ್ರಿಕೆಟಿಗನೆನಿಸಿಕೊಂಡಿದ್ದಾರೆ. ಐಪಿಎಲ್’ನಲ್ಲಿ ನಂ.3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ರೈನಾ ಇದುವರೆಗೂ 176 ಪಂದ್ಯಗಳನ್ನಾಡುವ ಮೂಲಕ ಅತಿಹೆಚ್ಚು ಪಂದ್ಯವಾಡಿದ  ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ. ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು 3 ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರೈನಾ, 2 ವರ್ಷ ಗುಜರಾತ್ ಲಯನ್ಸ್(2016-2017) ತಂಡವನ್ನೂ ಪ್ರತಿನಿಧಿಸಿದ್ದಾರೆ.

2 ವಿರಾಟ್ ಕೊಹ್ಲಿ: 4,948 (RCB)


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ 11 ಆವೃತ್ತಿಯಲ್ಲೂ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆ ಬರೆದಿದ್ದಾರೆ. ಇದುವರೆಗೂ ಐಪಿಎಲ್’ನಲ್ಲಿ 163 ಪಂದ್ಯಗಳನ್ನಾಡಿರುವ ಕೊಹ್ಲಿ 4,948 ರನ್ ಬಾರಿಸಿದ್ದು, ರೈನಾಗಿಂತ ಕೊಹ್ಲಿ  ಕೇವಲ 37 ರನ್’ಗಳಷ್ಟೇ ಹಿಂದಿದ್ದಾರೆ. ಹೀಗಾಗಿ ಯಾರು ಮೊದಲು 5 ಸಾವಿರ ರನ್’ಗಳ ಕ್ಲಬ್ ಸೇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

3 ರೋಹಿತ್ ಶರ್ಮಾ: 4,493 (DC&MI)

 
ಹಾಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್(2008-10) ಮತ್ತು ಮುಂಬೈ ಇಂಡಿಯನ್ಸ್(2011ರಿಂದ ಪ್ರಸ್ತತ) ಪರ 173 ಪಂದ್ಯಗಳನ್ನಾಡಿರುವ ರೋಹಿತ್  4493 ರನ್ ಬಾರಿಸಿದ್ದಾರೆ. ಅಲ್ಲದೆ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮೂರು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸುವಲ್ಲಿ ಸಫಲವಾಗಿದ್ದಾರೆ.

4 ಗೌತಮ್ ಗಂಭೀರ್: 4,217 (DD&KKR) 


ಡೆಲ್ಲಿ ಮೂಲದ ಎಡಗೈ ಬ್ಯಾಟ್ಸ್’ಮನ್ ಗೌತಮ್ ಗಂಭೀರ್ ಕಳೆದ ವರ್ಷವಷ್ಟೇ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. ಆರಂಭದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್(2008-10) ಪರ ಕಣಕ್ಕಿಳಿದಿದ್ದ ಗೌತಿ ಆ ಬಳಿಕ(2011-17) ಕೋಲ್ಕತಾ ನೈಟ್ ರೈಡರ್ಸ್ ಸೇರಿ 2 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಆ ಬಳಿಕ 2018ರಲ್ಲಿ ಡೆಲ್ಲಿ ತಂಡವನ್ನು ಕೂಡಿಕೊಂಡರಾದರೂ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಒಟ್ಟು 154 ಪಂದ್ಯಗಳನ್ನಾಡಿದ ಗಂಭೀರ್ 4217 ರನ್ ಬಾರಿಸಿದ್ದಾರೆ.

5  ರಾಬಿನ್ ಉತ್ತಪ್ಪ: 4,086 (MI, RCB, PWI & KKR)


ಕನ್ನಡದ ಪ್ರತಿಭೆ ರಾಬಿನ್ ಉತ್ತಪ್ಪ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿ ಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ 2008ರಲ್ಲಿ ಐಪಿಎಲ್’ಗೆ ಪದಾರ್ಪಣೆ ಮಾಡಿದ ಉತ್ತಪ್ಪ, 2009-10ರಲ್ಲಿ  ಆರ್’ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು 2011-13ರವರೆಗೆ ಪುಣೆ ವಾರಿಯರ್ಸ್ ಇಂಡಿಯಾ ಪರ ಕಣಕ್ಕಿಳಿದಿದ್ದ ಅವರು, 2014ರಿಂದ ಕೆಕೆಆರ್’ನ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಇದುವರೆಗೆ 165 ಪಂದ್ಯಗಳನ್ನಾಡಿರುವ ಅವರು 4086 ರನ್ ಬಾರಿಸಿದ್ದಾರೆ.

6 ಶಿಖರ್ ಧವನ್: 4,058 (DD,MI&SRH)


ಡೆಲ್ಲಿ ಮೂಲದ ಮತ್ತೋರ್ವ ಎಡಗೈ ಬ್ಯಾಟ್ಸ್’ಮನ್ ಶಿಖರ್ ಧವನ್ ಐಪಿಎಲ್’ಗೆ ಡೆಲ್ಲಿ ಡೇರ್’ಡೆವಿಲ್ಸ್(2008) ಪದಾರ್ಪಣೆ ಮಾಡಿದರು. ಆ ಬಳಿಕ ಮುಂಬೈ ಇಂಡಿಯನ್ಸ್(2009-10) ಸೇರಿಕೊಂಡ ಧವನ್ (2013-18) ಸನ್’ರೈಸರ್ಸ್ ಹೈದರಾಬಾದ್ ತೆಕ್ಕೆಗೆ ಜಾರಿದರು. 2019ರ 12ನೇ ಆವೃತ್ತಿಯಲ್ಲಿ  ಧವನ್ ಡೆಲ್ಲಿ  ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಇದುವರೆಗೂ 143 ಪಂದ್ಯಗಳನ್ನಾಡಿರುವ ಧವನ್ 4058 ರನ್ ಬಾರಿಸಿದ್ದಾರೆ.

7 ಮಹೇಂದ್ರ ಸಿಂಗ್ ಧೋನಿ: 4,016(CSK&RPS) 


ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಇದುವರೆಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು 3 ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2008ರಿಂದ 2015ರವರೆಗೂ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ಪ್ರವೇಶಿದ್ದ ಸಿಎಸ್’ಕೆ ನಿಷೇಧ(2016-17)ದ ಬಳಿಕ 2018ರಲ್ಲಿ ಧೋನಿ ನಾಯಕತ್ವದಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2 ವರ್ಷ ಧೋನಿ ರೈಸಿಂಗ್ ಪುಣೆ ಸೂಪರ್’ಜೈಂಟ್ಸ್ ತಂಡದ ಪರವೂ ಕಣಕ್ಕಿಳಿದಿದ್ದರು. ಇದುವರೆಗೂ ಧೋನಿ 175 ಪಂದ್ಯಗಳನ್ನಾಡಿ 4016 ರನ್ ಬಾರಿಸಿದ್ದಾರೆ. 

8 ಡೇವಿಡ್ ವಾರ್ನರ್: 4,014[DD&SRH]


ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (2009-2013) ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಕಾಣಿಸಿಕೊಂಡಿದ್ದರು. ಆ ಬಳಿಕ 2014ರಲ್ಲಿ ಸನ್’ರೈಸರ್ಸ್ ಹೈದರಾಬಾದ್ ಕೂಡಿಕೊಂಡ ವಾರ್ನರ್ 2016ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಸಫಲರಾದರು. ಒಟ್ಟು 114 ಪಂದ್ಯಗಳನ್ನಾಡಿರುವ ವಾರ್ನರ್ 4,014 ರನ್ ಬಾರಿಸಿದ್ದಾರೆ.

9 ಕ್ರಿಸ್ ಗೇಲ್: 3,994 (KKR, RCB & KXIP)


ಕ್ರಿಕೆಟ್ ಜಗತ್ತಿನ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ (2008-10) ಕೋಲ್ಕತಾ ನೈಟ್’ರೈಡರ್ಸ್ ಪರ ಐಪಿಎಲ್’ಗೆ ಪದಾರ್ಪಣೆ ಮಾಡಿದರು. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡ ಗೇಲ್ 7 ವರ್ಷಗಳ ಕಾಲ ಅನೇಕ ಸ್ಮರಣೀಯ ಇನ್ನಿಂಗ್ಸ್ ಕಟ್ಟುವ ಮೂಲಕ ಆರ್’ಸಿಬಿ ಅಭಿಮಾನಿಗಳನ್ನು ರಂಜಿಸಿದ್ದರು. 2018ರ ಆವೃತ್ತಿಯಲ್ಲಿ ಗೇಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಕಣಕ್ಕಿಳಿದಿದ್ದರು. ಗೇಲ್ ಕೇವಲ 112 ಇನ್ನಿಂಗ್ಸ್’ಗಳಲ್ಲಿ 41.17ರ ಸರಾಸರಿಯಲ್ಲಿ 3994 ರನ್ ಬಾರಿಸಿದ್ದು, 4 ಸಾವಿರ ರನ್ ಕ್ಲಬ್ ಸೇರಲು ಇನ್ನು ಕೇವಲ 6 ರನ್’ಗಳು ಬಾಕಿ ಇವೆ.

10 ಎಬಿ ಡಿವಿಲಿಯರ್ಸ್: 3,953 (DD&RCB)


ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ (2008-10) ಡೆಲ್ಲಿ ಡೇರ್’ಡೆವಿಲ್ಸ್ ಪರ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದರು. 2011ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿರುವ ಎಬಿಡಿ ಇದುವರೆಗೂ 141 ಪಂದ್ಯಗಳಲ್ಲಿ 3953 ರನ್ ಬಾರಿಸಿದ್ದಾರೆ. 4 ಸಾವಿರ ರನ್ ಬಾರಿಸಿದವರ ಕ್ಲಬ್ ಸೇರಲು ಎಬಿಡಿಗೆ ಬೇಕಿರುವುದು ಕೇವಲ 47 ರನ್ ಮಾತ್ರ.

ಇದನ್ನು ಓದಿ: IPL ಫ್ಲಾಶ್'ಬ್ಯಾಕ್: 1 ಟು 11 ಸೀಸನ್ ಮನರಂಜನೆಯ ಕ್ವಿಕ್ ಚೆಕ್

ಇದನ್ನು ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!