ಹೈದರಾಬಾದ್(ಮೇ.12): ಐಪಿಎಲ್ 12ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಬ್ಬರಿಸೋ ವಿಶ್ವಾಸದಲ್ಲಿದ್ದ ಮುಂಬೈ 8 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿದೆ. ಈ ಮೂಲಕ CSKಗೆ 150 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ರೋಹಿತ್ ಹಾಗೂ ಡಿಕಾಕ್ 45 ರನ್ ಜೊತೆಯಾಟ ನೀಡಿದರು. ಡಿಕಾಕ್ 17 ಎಸೆತದಲ್ಲಿ 4 ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ಸೇರಿದರು. ರೋಹಿತ್ 14 ಎಸೆತದಲ್ಲಿ 15 ರನ್ ಸಿಡಿಸಿ ಔಟಾದರು.

ಆರಂಭಿಕರ ವಿಕೆಟ್ ಪತನದ ಬಳಿಕ ಮುಂಬೈ ಚೇತರಿಸಿಕೊಳ್ಳಲಿಲ್ಲ. ಸೂರ್ಯಕುಮಾರ್ ಯಾಧವ್ 15 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಕೇವಲ 7 ರನ್‌ ಸಿಡಿಸಿ ನಿರ್ಗಮಿಸಿದರು. ಇನ್ನು ಇಶಾನ್ ಕಿಶನ್ 23 ರನ್ ಕಾಣಿಕೆ ನೀಡಿದರು. ಕೀರನ್ ಪೋಲ್ಲಾರ್ಡ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.

ಹಾರ್ದಿಕ್ ಪಾಂಡ್ಯ 16 ರನ್ ಸಿಡಿಸಿ ಔಟಾದರು. ರಾಹುಲ್ ಚಹಾರ್ ಶೂನ್ಯ ಸುತ್ತಿದರು. ಅಂತಿಮ ಓವರ್‌ನಲ್ಲಿ ಡ್ರಾಮ ನಡೆಯಿತು. ಡ್ವೇನ್ ಬ್ರಾವೋ ಎಸೆತಕ್ಕೆ ಅಂಪೈರ್ ವೈಡ್ ನೀಡಲಿಲ್ಲ. ಸಿಟ್ಟಿಗೆದ್ದ ಪೊಲಾರ್ಡ್ ಬ್ಯಾಟ್ ಎಸೆದರು. ಮರು ಎಸೆತಕ್ಕೆ ಬಂದಾಗ ಪೊಲಾರ್ಡ್ ಕ್ರೀಸ್ ಬಿಟ್ಟು ತೆರಳಿದರು. ಪೊಲಾರ್ಡ್ ವರ್ತನೆಗೆ ಅಂಪೈರ್ ಎಚ್ಚರಿಕೆ ನೀಡಿದರು. ಇದೇ ವೇಳೆ ಮಿಚೆಲ್ ಮೆಕ್ಲೆನಾಘನ್ ರನೌಟ್‌ಗೆ ಬಲಿಯಾದರು.

ಅಂತಿಮ 2 ಎಸೆತದಲ್ಲಿ ಬೌಂಡರಿ ಸಿಡಿಸೋ ಮೂಲಕ ಪೊಲಾರ್ಡ್ ಅಜೇಯ 41 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು. ದೀಪಕ್ ಚಹಾರ್ 3, ಶಾರ್ದೂಲ್ ಠಾಕೂರ್ ಹಾಗೂ ಇಮ್ರಾನ್ ತಾಹೀರ್ ತಲಾ 2 ವಿಕೆಟ್ ಉರುಳಿಸಿದರು.