ಬೆಂಗಳೂರು(ಮೇ.04): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಂತಿಮ ಪಂದ್ಯದಲ್ಲೂ ಬೌಲರ್‌ಗಳು ದುಬಾರಿಯಾಗಿದ್ದಾರೆ. ಸ್ಲಾಗ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸ್ ಹೋರಾಟದಿಂದ SRH 7 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿದೆ.
 
ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆಯಿತು. ವೃದ್ಧಿಮಾನ್ ಸಾಹ ಹಾಗೂ ಮಾರ್ಟಿನ್ ಗಪ್ಟಿಲ್ ಮೊದಲ ವಿಕೆಟ್‌ಗೆ 46 ರನ್ ಜೊತೆಯಾಟ ನೀಡಿದರು. ಸಾಹ 20 ರನ್ ಕಾಣಿಕೆ ನೀಡಿದರೆ, ಗಪ್ಟಿಲ್ 30 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ ಕೇವಲ 9 ರನ್ ಸಿಡಿಸಿ ನಿರಾಸೆ ಅನುಭವಿಸಿದರು. 

ನಾಯಕ ಕೇನ್ ವಿಲಿಯಮ್ಸನ್ ಹಾಗೂ ವಿಜಯ್ ಶಂಕರ್ ಜೊತೆಯಾಟ ಹೈದರಾಬಾದ್ ತಂಡಕ್ಕೆ ನೆರವಾಯಿತು. ಆದರೆ ಸತತ 2 ಸಿಕ್ಸರ್ ಸಿಡಿಸಿ ಹ್ಯಾಟ್ರಿಕ್ ಸಿಕ್ಸರ್‌ಗೆ ಯತ್ನಿಸಿದ ಶಂಕರ್ 27 ರನ್ ಸಿಡಿಸಿ ಔಟಾದರು. ವಿಲಿಯಮ್ಸನ್ ಹೋರಾಟ ಮುಂದುವರಿಸಿದರೆ, ಇತ್ತ ಯೂಸುಫ್ ಪಠಾಣ್ ಕೇವಲ 3 ರನ್ ಸಿಡಿಸಿ ಔಟಾದರು.

ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಅಬ್ಬರಿಸಲಿಲ್ಲ. ಆಕರ್ಷಕ ಅರ್ಧಶತಕ ಸಿಡಿಸಿದ ವಿಲಿಯಮ್ಸನ್ 43 ಎಸೆತದಲ್ಲಿ 70 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು. ಇದೀಗ ಗೆಲುವಿನೊಂದಿಗೆ ವಿದಾಯ ಹೇಳಲು RCB 176 ರನ್ ಸಿಡಿಸಬೇಕಿದೆ.