ಹೈದರಾಬಾದ್(ಏ.14): ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನೈಜ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಎಡವಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಸಿಡಿಸಿದೆ.  ಈ ಮೂಲಕ ಸನ್‌ರಸರ್ಸ್ ಗೆಲುವಿಗೆ 156 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಇಬ್ಬರೂ ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಕಾಲಿನ್ ಮುನ್ರೊ 40 ರನ್ ಸಿಡಿಸೋ ಮೂಲಕ ಡೆಲ್ಲಿ ಉಸಿರಾಡಿತು. 

ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಅಯ್ಯರ್ 40 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ರಿಷಬ್ ಪಂತ್ 23 ರನ್ ಸಿಡಿಸಿ ನಿರ್ಗಮಿಸಿದರು. ಕ್ರಿಸ್ ಮೊರಿಸ್ ಕೇವಲ 4 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಅಜೇಯ 14 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಸಿಡಿಸಿತು.