ಜೈಪುರ(ಏ.02): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 3 ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ RCB 4ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿದೆ. ಈ ಮೂಲಕ RR ತಂಡಕ್ಕೆ 159 ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ಕೈಕೊಟ್ಟ ಮಾಲಿಂಗ- ಲಂಕಾಗೆ ವಾಪಾಸ್!

ಟಾಸ್ ಸೋತು ಬ್ಯಾಟಿಂಗ್ ಇಳಿದ RCB ಹಿಂದಿನ 3 ಪಂದ್ಯಕ್ಕಿಂತ ಉತ್ತಮ ಆರಂಭ ಪಡೆಯಿತು. 4ನೇ ಪಂದ್ಯದಲ್ಲೂ RCB ಆರಂಭಿಕರ ಬದಲಾವಣೆ ಮಾಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟ ನೀಡಿದರು. ಆದರೆ ಕೊಹ್ಲಿ ಆಟ 23 ರನ್‌ಗಳಿಗೆ ಅಂತ್ಯವಾಯಿತು.

ಪಾರ್ಥೀವ್ ಪಟೇಲ್ ಏಕಾಂಗಿ ಹೋರಾಟ ನೀಡಿದರು. ಆದರೆ ಪಾರ್ಥೀವ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಎಬಿ ಡಿವಿಲಿಯರ್ಸ್ 13 ರನ್ ಸಿಡಿಸಿ ಔಟಾದರೆ, ಶಿಮ್ರೊನ್ ಹೆಟ್ಮೆಯಲ್ ಸತತ ನಾಲ್ಕನೇ ಪಂದ್ಯದಲ್ಲೂ ನಿರಾಸೆ ಅನುಭವಿಸಿದರು. ಪಾರ್ಥೀವ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ RCBಗೆ ಚೇತರಿಕೆ ನೀಡಿದರು. ಪಾರ್ಥೀವ್ ಅರ್ಧಶತಕ ಸಿಡಿಸಿದರು.

ಇದನ್ನೂ ಓದಿ: ಟ್ರೋಲ್ ಆಗ್ತಾ ಇರೋದು RCB ತಂಡವಲ್ಲ, RCB ಅಭಿಮಾನಿಗಳು..!

ಅಬ್ಬರಿಸಿದ ಪಾರ್ಥೀವ್ 41 ಎಸೆತದಲ್ಲಿ 67 ರನ್ ಸಿಡಿಸಿ ಔಟಾದರು. ಸ್ಟೊಯ್ನಿಸ್ ಹಾಗೂ ಮೊಯಿನ್ ಆಲಿ ಹೋರಾಟದಿಂದ RCB ತಂಡ 150ರ ಗಡಿ ದಾಟಿತು. ಸ್ಟೊಯ್ನಿಸ್ ಅಜೇಯ 31 ಹಾಗೂ ಮೊಯಿನ್ ಆಲಿ ಅಜೇಯ 18 ರನ್ ಸಿಡಿಸಿದರು. ಇದರೊಂದಿಗೆ ಬೆಂಗಳೂರು 4 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.