ಮೊಹಾಲಿ(ಏ.13): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸತತ 6 ಪಂದ್ಯ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7ನೇ ಪಂದ್ಯದಲ್ಲಿ ಗೆಲವಿನ ಸಿಹಿ ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್‌ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ RCB 8 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಸೋಲಿನ ಸರಣಿಯಿಂದ ಹೊರಬಂದಿದೆ.

ರಾಮನವಮಿ ದಿನ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಹೋರಾಡಿದ RCB ಗೆಲುವಿಗೆ 174 ರನ್ ಟಾರ್ಗೆಟ್ ಪಡೆಯಿತು. RCB ಆರಂಭ ಉತ್ತಮವಾಗಿರಲಿಲ್ಲ. ಪಾರ್ಥೀವ್ ಪಟೇಲ್ 19 ರನ್ ಸಿಡಿಸಿ ಔಟಾದರು. ಆದರೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಾಟ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.

ಅದ್ಬುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. ಕೊಹ್ಲಿ 53 ಎಸೆತದಲ್ಲಿ 8 ಬೌಂಡರಿ ಸಹಿತ 67 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ ಜೊತೆ ಸೇರಿದ ಎಬಿ ಡಿವಿಲಿಯರ್ಸ್ RCB ತಂಡದ ಜವಾಬ್ದಾರಿ ಹೊತ್ತು ಬ್ಯಾಟಿಂಗ್ ನಡೆಸಿದರು. ಎಬಿಡಿ ಹಾಫ್ ಸೆಂಚುರಿ ಸಿಡಿಸಿದರು. ಅಂತಿಮ 12 ಎಸೆತದಲ್ಲಿ RCB ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. 

ಶಮಿ ಎಸೆತದಲ್ಲಿ ಸ್ಟೊಯ್ನಿಸಿ ಸಿಡಿಸಿದ ಬೌಂಡರಿ ಹಾಗೂ ಎಬಿ ಡಿವಿಲಿಯರ್ಸ್ ಸಿಕ್ಸರ್ ಭಾರಿಸೋ ಮೂಲಕ RCB ಅಭಿಮಾನಿಗಳ ಆತಂಕ ದೂರ ಮಾಡಿದರು. ಅಂತಿಮ ಓವರ್‌ನಲ್ಲಿ RCB ಗೆಲುವಿಗೆ 6 ರನ್ ಬೇಕಿತ್ತು. ಇನ್ನು 4 ಎಸೆತ ಬಾಕಿ ಇರುವಂತೆಯೇ RCB 8 ವಿಕೆಟ್ ಭರ್ಜರಿ ಗೆಲುವು ಕಂಡಿತು. ಈ ಮೂಲಕ ಈ ಆವೃತ್ತಿಯ ಮೊದಲ ಗೆಲುವು ಸಾಧಿಸಿತು.