ಬೆಂಗಳೂರು(ಏ.08): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯ ನಾಯಕತ್ವ ಗುಣಗಳ ಮೇಲೆಯೇ ಅನುಮಾನ ಶುರುವಾಗಿದೆ. ಇದಕ್ಕೆ ಐಪಿಎಲ್‌ ಕಾರಣ. ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡವನ್ನು ಕಳೆದ 8 ವರ್ಷಗಳಿಂದ ಮುನ್ನಡೆಸುತ್ತಿರುವ ವಿರಾಟ್‌ ಒಮ್ಮೆಯೂ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿಲ್ಲ. ಕಳೆದೆರಡು ವರ್ಷಗಳಿಂದ ‘ಈ ಸಲ ಕಪ್‌ ನಮ್ದೆ’ ಎನ್ನುವ ಘೋಷ ವಾಕ್ಯ ಆರ್‌ಸಿಬಿ ಮತ್ತಷ್ಟುಮುಜುಗರಕ್ಕೀಡಾಗುವಂತೆ ಮಾಡಿದೆ. 12ನೇ ಆವೃತ್ತಿಯಲ್ಲಿ ಸತತ 6ನೇ ಸೋಲು ಕಂಡಿರುವ ಆರ್‌ಸಿಬಿಯಿಂದಾಗಿ ಕೊಹ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ ಮುಂದಿಟ್ಟುಕೊಂಡು ಕೊಹ್ಲಿ ಐಪಿಎಲ್‌ನಲ್ಲಿ ಆಡಬೇಕಿತ್ತಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಇದನ್ನೂ ಓದಿ: ಸೋತರೂ ಡೆಲ್ಲಿ ಜತೆಗೆ ನಂ.1 ಸ್ಥಾನ ಹಂಚಿಕೊಂಡ RCB..!

ಒತ್ತಡಕ್ಕೆ ಅಸಲಿ ಕಾರಣವೇನು?: ವಿರಾಟ್‌ ಗೆದ್ದಾಗ ಉಬ್ಬುವ, ಸೋತಾಗ ಕುಗ್ಗುವ ವ್ಯಕ್ತಿತ್ವದವರು. ಆಕ್ರಮಣಕಾರಿ ಆಟದ ಶೈಲಿಯಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿ, ಹಲವು ದಾಖಲೆಗಳನ್ನು ಬರೆದವರು. ಆದರೆ ಆರ್‌ಸಿಬಿ ನಾಯಕರಾಗಿ ಅವರ ವೈಫಲ್ಯ ಈ ಹಿಂದಿನ ಆವೃತ್ತಿಗಳಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ವಿಶ್ವಕಪ್‌ ವರ್ಷವಾಗಿರುವ ಕಾರಣ ಈ ಬಾರಿ ಭಾರೀ ಚರ್ಚೆಯಾಗುತ್ತಿದೆ. ಬಹಿರಂಗವಾಗಿಯೇ ಸಹ ಆಟಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿರಾಟ್‌, ಪಂದ್ಯದಿಂದ ಪಂದ್ಯಕ್ಕೆ ಹೆಚ್ಚೆಚ್ಚು ಕುಗ್ಗುತ್ತಿದ್ದಾರೆ. ಜತೆಗೆ ದೈಹಿಕವಾಗಿಯೂ ಅವರು ದಣಿದಿದ್ದಾರೆ.

ಇದನ್ನೂ ಓದಿ : ಸತತ 6ನೇ ಸೋಲಿಗೆ ಸಾಕ್ಷಿಯಾದ RCB..!

ವಿರಾಟ್‌ಗೆ ಧೋನಿಯಂತೆ ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲಿ ಬೇಕಿದ್ದರೂ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಗುಣವಿಲ್ಲ. ಇತರೆ ನಾಯಕರಂತೆ ಗೆಲ್ಲಲು ಹೊಸ ದಾರಿಗಳನ್ನು ಹುಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್‌ಗೂ ಮೊದಲು ಐಪಿಎಲ್‌ ಆಯೋಜಿಸಿ, ಭಾರತ ತಂಡ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದರೆ ಅದಕ್ಕೆ ಬಿಸಿಸಿಐ ನೇರ ಹೊಣೆಯಾಗಲಿದೆ.