Asianet Suvarna News Asianet Suvarna News

RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ರೋಚಕ  ಹೋರಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ನಗೆ  ಬೀರಿದೆ. ಈ ಮೂಲಕ ಸತತ 3ನೇ ಗೆಲುವು ದಾಖಲಿಸಿದೆ. RCB ತಂಡದ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

Ipl 2019 RCB beat kings XI Punjab by 17 runs at bengaluru
Author
Bengaluru, First Published Apr 24, 2019, 11:45 PM IST

ಬೆಂಗಳೂರು(ಏ.24): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ RCB ಇದೀಗ ಎರಡನೇ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ RCB 17 ರನ್ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.

ಎಬಿ ಡಿವಿಲಿಯರ್ಸ್ ಅಬ್ಬರಿಂದ RCB 203 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಗುರಿ ಪಡೆದ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸರೆಯಾದರು. ಆದರೆ ಗೇಲ್ 23 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್, ಕೊಹ್ಲಿ ಸೈನ್ಯದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಮಯಾಂಕ್ ಅಗರ್ವಾಲ್ 35 ರನ್  ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ರಾಹುಲ್ 27 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 42 ರನ್ ಸಿಡಿಸಿ ಔಟಾದರು. ಆದರೆ ಡೇವಿಡ್ ಮಿಲ್ಲರ್ ಹಾಗೂ ನಿಕೋಲಸ್ ಪೂರನ್ RCB ಆತಂಕ ಹೆಚ್ಚಿಸಿದರು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ಮಿಲ್ಲರ್ ಹೋರಾಟ 24 ರನ್‌ಗೆ ಅಂತ್ಯವಾಯಿತು.

ಮಾರ್ಕಸ್ ಸ್ಟೊಯ್ನಿಸ್‌ನಿಂದ ಜೀವದಾನ ಪಡೆದ ಪೊರನ್ 28 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಇದರೊಂದಿಗೆ ಪಂಜಾಬ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 27 ರನ್ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ನಾಯಕ ಆರ್ ಅಶ್ವಿನ್ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಆತಂಕ ಹೆಚ್ಚಿಸಿದರು. ಆದರೆ ಮರು ಎಸೆತದಲ್ಲೇ ಅಶ್ವಿನ್ ವಿಕೆಟ್ ಪತನಗೊಂಡಿತು. 

ಹಾರ್ಡಸ್ ವಿಲ್ಜೋನ್ ಕೂಡ ನೆರವಾಗಲಿಲ್ಲ. ಹೀಗಾಗಿ ಪಂಜಾಬ್ 7 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿತು. ಈ ಮೂಲಕ RCB 17 ರನ್ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಸತತ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ RCB, ರಾಜಸ್ಥಾನ ರಾಯಲ್ಸ್ ಹಿಂದಿಕ್ಕಿ 7ನೇ ಸ್ಥಾನಕ್ಕೇರಿತು.

Follow Us:
Download App:
  • android
  • ios