ಹೈದರಾಬಾದ್(ಏ.29):  ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್, ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಬ್ಬರಿಸಿದೆ. ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ SRH 6 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿದೆ. ಈ ಮೂಲಕ ಪಂಜಾಬ್‌ಗೆ 213 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 78 ರನ್ ಜೊತೆಯಾಟ ನೀಡಿದರು. ಸಾಹ 28 ರನ್ ಸಿಡಿಸಿ ಔಟಾದರು. ಆದರೆ ವಾರ್ನರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಅರ್ಧಶತಕ ಸಿಡಿಸಿದ ವಾರ್ನರ್‌ಗೆ ಕನ್ನಡಿಗ ಮನೀಶ್ ಪಾಂಡೆ ಉತ್ತಮ ಸಾಥ್ ನೀಡಿದರು. ಆದರೆ ಪಾಂಡೆ 36 ರನ್ ಸಿಡಿಸಿ ನಿರ್ಗಮಿಸಿದರು. ಶತಕದತ್ತ ಮುನ್ನುಗ್ಗುತ್ತಿದ್ದ ವಾರ್ನರ್‌ಗೆ , ಪಂಜಾಬ್ ನಾಯಕ ಆರ್ ಅಶ್ವಿನ್ ಬ್ರೇಕ್ ಹಾಕಿದರು. ವಾರ್ನರ್ 56 ಎಸೆತದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 81 ರನ್ ಸಿಡಿಸಿ ಔಟಾದರು.

ನಾಯಕ ಕೇನ್ ವಿಲಿಯಮ್ಸನ್ 14 ರನ್ ಸಿಡಿಸಿ ಔಟಾದರೆ, 2 ಸಿಕ್ಸರ್ ಸಿಡಿಸಿ ಅಬ್ಬರಿಸಿದ ಮೊಹಮ್ಮದ್ ನಬಿ 20 ರನ್ ಸಿಡಿಸಿ ಔಟಾದರು. ರಶೀದ್ ಖಾನ್ ಅಬ್ಬರಿಸಿಲ್ಲ. ನಿಗದಿತ 20 ಓವರ್‌ಗಳಲ್ಲಿ  ಸನ್ ರೈಸರ್ಸ್ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿತು.