ಮುಂಬೈ ನೀಡಿದ ಟಾರ್ಗೆಟ್ ಕೇವಲ 137 ರನ್. ಸನ್ ರೈಸರ್ಸ್ ತಂಡದಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋ, ವಿಜಯ್ ಶಂಕರ್ ಸೇರಿದಂತೆ 7 ಘಟಾನುಘಟಿ ಬ್ಯಾಟ್ಸ್‌ಮನ್ಸ್. ಆದರೂ ಗೆಲುವು ಮಾತ್ರ ಸಿಗಿಲ್ಲ. ಅಲ್ಪಮೊತ್ತದಲ್ಲೂ ಅದ್ಬುತ ಪ್ರದರ್ಶನ ನೀಡಿದ ಮುಂಬೈ ಗೆಲುವಿನ ಸಿಹಿ ಕಂಡಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಹೈದರಾಬಾದ್(ಏ.06): ಐಪಿಎಲ್ ಲೀಗ್ ಟೂರ್ನಿಯ 19ನೇ ಪಂದ್ಯ ಅಲ್ಪಮೊತ್ತದಲ್ಲೂ ಸಖತ್ ಮನರಂಜನೆ ನೀಡಿದೆ. ಮುಂಬೈ ಇಂಡಿಯನ್ಸ್ ನೀಡಿದ 137 ರನ್ ಸುಲಭ ಟಾರ್ಗೆಟ್, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೇಸ್ ಮಾಡಲು ಸಾಧ್ಯವಾಗಿಲ್ಲ. ಅಲ್ಜಾರಿ ಜೋಸಫೆ ದಾಳಿಗೆ ನಲುಗಿದ ರೈಸರ್ಸ್ 17.4 ಓವರ್‌ಗಳಲ್ಲಿ 96 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಮುಂಬೈ 40 ರನ್ ಗೆಲುವು ಸಾಧಿಸಿತು. 

137 ರನ್ ಟಾರ್ಗೆಟ್ ತವರಿನಲ್ಲಿ ಸನ್ ರೈಸರ್ಸ್ ತಂಡಕ್ಕೆ ಸುಲಭ ತುತ್ತಾಗಿತ್ತು. ಆದರೆ ಹೈದರಾಬಾದ್ ತಂಡಕ್ಕೆ ಮುಂಬೈ ಬೌಲರ್‌ಗಳು ಶಾಕ್ ನೀಡಿದರು. ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟ 33 ರನ್‌ಗಳಿಗೆ ಅಂತ್ಯವಾಯಿತು. ಬೈರ್‌ಸ್ಟೋ 16 ರನ್ ಸಿಡಿಸಿ ಔಟಾದರೆ, ವಾರ್ನರ್ 15 ರನ್‌ಗೆ ಸುಸ್ತಾದರು.

ವಿಜಯ್ ಶಂಕರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಕೇವಲ 5 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ ಆಟ 16 ರನ್‌ಗೆ ಅಂತ್ಯವಾಯಿತು. ಯೂಸುಫ್ ಪಠಾಣ್ ಡಕೌಟ್ ಆದರು. ಸಂಕಷ್ಟದಲ್ಲೂ ಹೈದರಾಬಾದ್ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿದ ದೀಪಕ್ ಹೂಡ 20 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ರಶೀದ್ ಖಾನ್ ಔಟಾದರು. ಮೊಹಮ್ಮದ್ ನಬಿ 11 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ಅಲ್ಜಾರಿ ಜೋಸೆಫ್ ದಾಳಿಗೆ ತತ್ತರಿಸಿದ ಹೈದರಾಬಾದ್ ವಿಕೆಟ್ ಉಳಿಸಿಕೊಳ್ಳಲು ಪರದಾಡಿತು. ಬರೋಬ್ಬರಿ 6 ವಿಕೆಟ್ ಕಬಳಿಸೋ ಮೂಲಕ ರೈಸರ್ಸ್ ತಂಡವನ್ನು 17.4 ಓವರ್‌ಗಳಲ್ಲಿ 96 ರನ್‌ಗೆ ಆಲೌಟ್ ಮಾಡಿದರು. ಈ ಮೂಲಕ ಮುಂಬೈ 40 ರನ್ ಗೆಲುವು ಸಾಧಿಸಿತು.