ಮುಂಬೈ(ಏ.10): ಕೆಎಲ್ ರಾಹುಲ್ ಶತಕ ಹಾಗೂ ಕ್ರಿಸ್ ಗೇಲ್ ಸಿಡಿಸಿದ ಅರ್ಧಶತಕ ವ್ಯರ್ಥವಾಗಿದೆ. ವಾಂಖೆಡೆಯಲ್ಲಿ ನಾಯಕ ಕೀರನ್ ಪೋಲಾರ್ಡ್ ಅಬ್ಬರದ ಮುಂದೆ ಪಂಜಾಬ್ ಮಂಕಾಗಿದೆ. ಭರ್ಜರಿ 10 ಸಿಕ್ಸರ್ ಸಿಡಿಸೋ ಮೂಲಕ ಪೊಲಾರ್ಡ್ ಮುಂಬೈ ಇಂಡಿಯನ್ಸ್‌ಗೆ  3 ವಿಕೆಟ್ ಗೆಲುವು ತಂದುಕೊಟ್ಟರು. 

ಗೆಲುವಿಗೆ 198 ರನ್ ಟಾರ್ಗೆಟ್ ಪಡೆದ ಮುಂಬೈ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ರೋಹಿತ್ ಶರ್ಮಾ ಬದಲು ಆರಂಭಿಕನಾಗಿ ಕಣಕ್ಕಿಳಿದ ಸಿದ್ದೇಶ್ ಲಾಡ್ 15 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ 21 ರನ್ ಸಿಡಿಸಿ ಔಟಾದರು. 56 ರನ್‌ಗೆ 2 ವಿಕೆಟ್ ಕಳೆದುಕೊಂಡ ಮುಂಬೈ ಹಾದಿ ಕಠಿಣವಾಯಿತು.

ಕ್ವಿಂಟನ್ ಡಿಕಾಕ್ 24 ರನ್ ಸಿಡಿಸಿ ನಿರ್ಗಮಿಸಿದರು.  ನಾಯಕ ಕೀರನ್ ಪೊಲಾರ್ಡ್ ತಂಡಕ್ಕೆ ಆಸರೆಯಾದರು. ಆದರೆ ಇಶಾನ್ ಕಿಶನ್ 7 ರನ್ ಸಿಡಿಸಿ ರನೌಟ್ ಆದರು. ಪಂಜಾಬ್ ಕರಾರುವಕ್ ದಾಳಿಗೆ  ಮುಂಬೈ  ರನ್ ಗಳಿಸಲು ತಿಣುಕಾಡಿತು. ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಪಾಂಡ್ಯ ಹೋರಾಟ 19 ರನ್‌ಗೆ ಅಂತ್ಯವಾಯಿತು.

ಕ್ರುನಾಲ್ ಪಾಂಡ್ಯ ಕೇವಲ 1 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಅಂತಿಮ 12 ಎಸೆತದಲ್ಲಿ ಮುಂಬೈ ಗೆಲುವಿಗೆ 32 ರನ್ ಅವಶ್ಯಕತೆ ಇತ್ತು. ಪೊಲಾರ್ಡ್ ಸಿಕ್ಸರ್ ಸುರಿಮಳೆಗೆ ಪಂದ್ಯದ ಗತಿ ಬದಲಾಯಿತು. ಅಂತಿಮ ಓವರ್‌ನ ಮೊದಲ ನೋ ಬಾಲ್ ಎಸೆತಕ್ಕೆ ಪೊಲಾರ್ಡ್ ಸಿಕ್ಸರ್ ಸಿಡಿಸಿದರು. ಇನ್ನು ಫ್ರೀ ಹಿಟ್ ಎಸೆತವೂ ಪೆವಿಲಿಯನ್ ಸೇರಿಕೊಂಡಿತು. 5 ಎಸೆತದಲ್ಲಿ 4 ರನ್ ಬೇಕಿತ್ತು. ಅಷ್ಟರಲ್ಲೇ ಪೊಲಾರ್ಡ್ ವಿಕೆಟ್ ಪತನಗೊಂಡಿತು.

ಪೊಲಾರ್ಡ್ 31 ಎಸೆತದಲ್ಲಿ 10 ಸಿಕ್ಸರ್,3 ಬೌಂಡರಿ ಸಹಿತ 83 ರನ್ ಸಿಡಿಸಿ ಔಟಾದರು. ಅಂತಿಮ ಎಸೆತದಲ್ಲಿ ಮುಂಬೈಗೆ 2 ರನ್ ಬೇಕಿತ್ತು. ಅಲ್ಜಾರಿ ಜೊಸೆಫ್ 2 ರನ್ ಸಿಡಿಸಿ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು. ಮುಂಬೈ 3 ವಿಕೆಟ್ ಗೆಲುವು ಸಾಧಿಸಿತು.