ಮುಂಬೈ(ಏ.15): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸರಿಹೊಂದುತ್ತಿಲ್ಲ. ಸತತ 6 ಪಂದ್ಯ ಸೋತು 7ನೇ ಪಂದ್ಯ ಗೆದ್ದುಕೊಂಡಿದ್ದ RCB ಇದೀಗ 8ನೇ ಪಂದ್ಯದಲ್ಲಿ ಮತ್ತೆ ಮುಗ್ಗರಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ RCB ಸೋಲು ಅನುಭವಿಸಿದೆ.  ಈ ಮೂಲಕ RCB ಪ್ಲೇ ಆಫ್ ಕನಸು ಬಹುತೇಕ ಕಮರಿಹೋಗಿದೆ.

RCB ನೀಡಿದ 172 ರನ್ ಟಾರ್ಗೆಟ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲಿನ ಮೊತ್ತ ಆಗಿರಲಿಲ್ಲ. ಇದಕ್ಕೆ ತಕ್ಕಂತೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ 70 ರನ್ ಜೊತೆಯಾಟ ನೀಡಿದರು. ಮೊಯಿನ್ ಆಲಿ ಸ್ಪಿನ್ ಮೋಡಿಯಿಂದ ಆರಂಭಿಕ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು.  ರೋಹಿತ್ 28 ರನ್ ಸಿಡಿಸಿ ಔಟಾದರು. 26 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಕ್ವಿಂಟನ್ ಡಿಕಾಕ್ 40 ರನ್ ಸಿಡಿಸಿ ಔಟಾದರು.

ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಹೋರಾಟ ನೀಡಿದರೂ ದೊಡ್ಡ ಮೊತ್ತ ಕಲೆಹಾಕಲಿಲ್ಲ. ಕಿಶನ್ 21 ರನ್ ಸಿಡಿಸಿ ಔಟಾದರೆ, ಸೂರ್ಯಕುಮಾರ್ 29 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ 11 ರನ್ ಸಿಡಿಸಿ ಔಟಾದರು. ಹೀಗಾಗಿ ಮುಂಬೈಗೆ ಅಂತಿಮ 12 ಎಸೆತದಲ್ಲಿ 22 ರನ್ ಬೇಕಿತ್ತು. 

ಪವನ್ ನೇಗಿ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ 2  ಸಿಕ್ಸ್ ಹಾಗೂ 2 ಬೌಂಡರಿ ಬಾರಿಸಿ ಇನ್ನೂ ಒಂದು ಓವರ್ ಬಾಕಿ ಇರುವಂತೆ ಮುಂಬೈಗೆ 5 ವಿಕೆಟ್ ಗೆಲುವು ತಂದುಕೊಟ್ಟರು. ಪಾಂಡ್ಯ ಕೇವಲ 16 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ನಿಂದ ಅಜೇಯ 37 ರನ್ ಸಿಡಿಸಿದರು. ಮುಂಬೈ ಮತ್ತೆ ಗೆಲುವಿನ ಹಳಿಗೆ ಮರಳಿದರೆ, ಇತ್ತ RCBಗೆ ಮತ್ತೆ ಸೋಲೇ ಗತಿಯಾಯಿತು.