Asianet Suvarna News Asianet Suvarna News

CSK ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್!

12ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯ ಕಡಿಮೆ ಮೊತ್ತದಲ್ಲೂ ರೋಚಕ ಹೋರಾಟ ಮೂಡಿ ಬಂತು. ಬಲಿಷ್ಠ ಮುಂಬೈ ಹಾಗೂ ಚೆನ್ನೈ ನಡುವಿನ ಹೋರಾಟದಲ್ಲಿ ರೋಹಿತ್ ಪಡೆ ಮೇಲುಗೈ ಸಾಧಿಸಿದೆ. ಇಷ್ಟೇ ಅಲ್ಲ ನೇರವಾಗಿ ಫೈನಲ್ ಪ್ರವೇಶಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

IPL 2019 Mumbai beat csk by 6 wickets and entered Final
Author
Bengaluru, First Published May 7, 2019, 11:01 PM IST

ಚೆನ್ನೈ(ಮೇ.07):  12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಚಿಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉತ್ತಮ ಪ್ರದರ್ಶದ ಮೂಲಕ ಮುಂಬೈ ಇಂಡಿಯನ್ಸ್, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 6 ವಿಕೆಟ್ ಗೆಲುವು ಸಾಧಿಸಿದೆ.

ಗೆಲುವಿಗೆ 132 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್, ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು  ಆತಂಕಕ್ಕೆ ಒಳಗಾಯಿತು. ನಾಯಕ ರೋಹಿತ್ ಶರ್ಮಾ ಕೇವಲ 4 ರನ್ ಸಿಡಿಸಿ ಔಟಾದರೆ, ಕ್ವಿಂಟನ್ ಡಿಕಾಕ್  8 ರನ್ ಸಿಡಿಸಿ ನಿರ್ಗಮಿಸಿದರು.  21 ರನ್‌ಗೆ 2 ವಿಕೆಟ್ ಕಳೆದುಕೊಂಡ ಮುಂಬೈ ಒತ್ತಡಕ್ಕೆ ಸಿಲುಕಿತು.

ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಜೊತೆಯಾಟ ಮುಂಬೈ ಗೆಲುವಿನ ಆಸೆ ಮತ್ತೆ ಚಿಗುರಿಸಿತು. ಸೂರ್ಯಕುಮಾರ್ ಅರ್ಧಶತಕ ಸಿಡಿಸಿ ಮಿಂಚಿದರು. ಇತ್ತ ಇಶಾನ್ ಕಿಶನ್ ಉತ್ತಮ ಸಾಥ್ ನೀಡಿದರು. ಈ ಮೂಲಕ 3ನೇ ವಿಕೆಟ್‌ಗೆ ಈ ಜೋಡಿ 80 ರನ್ ಜೊತೆಯಾಟ ನೀಡಿತು.

ಇಶಾನ್ ಕಿಶನ್ 28 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಕೂಡ ಆಸರೆಯಾಗಲಿಲ್ಲ. ಸೂರ್ಯಕುಮಾರ್ ಯಾದವ್ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿನ ಹಾದಿ ಸುಗಮಗೊಳಿಸಿದರು. ಸೂರ್ಯಕುಮಾರ್ ಅಜೇಯ 71 ರನ್ ಸಿಡಿಸಿದರೆ, ಹಾರ್ದಿಕ್ 13 ರನ್ ಭಾರಿಸಿದರು. ಈ ಮೂಲಕ ಮುಂಬೈ ಇನ್ನೂ 9 ಎಸೆತ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಿತು.

ಭರ್ಜರಿ ಗೆಲುವಿನ ಮೂಲಕ ಮುಂಬೈ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಇತ್ತ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವಿನ್ನರ್ ಜೊತೆ  2ನೇ ಕ್ವಾಲಿಫೈಟರ್ ಪಂದ್ಯ ಆಡಿ  ಫೈನಲ್ ಪ್ರವೇಶಿಸಲು ಅವಕಾಶವಿದೆ.

Follow Us:
Download App:
  • android
  • ios