ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯ ಜನಪ್ರಿಯ ತಂಡ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ. ಹಲವರು ತಂಡದಿಂದ ಹೊರಬಿದ್ದಿದ್ದಾರೆ. 

ಬೆಂಗಳೂರು(ಆ.24): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಹಾಗೂ ಅತ್ಯಂತ ಜನಪ್ರಿಯ ತಂಡ. ಆದರೆ ಕಳೆದ 11 ವರ್ಷಗಳಿಂದ ಪ್ರಶಸ್ತಿಗಾಗಿ ಹೋರಾಡುತ್ತಲೇ ಇದೆ. ಕಳೆದ ಐಪಿಎಲ್ ಟೂರ್ನಿಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು.

2019ರ ಐಪಿಲ್ ಟೂರ್ನಿಗೆ ಈಗಲೇ ತಯಾರಿ ಆರಂಭಿಸಿರುವ ಆರ್‌ಸಿಬಿ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ತಂಡದ ಹೆಡ್ ಕೋಚ್ ಡೆನಿಯಲ್ ವೆಟ್ಟೋರಿ ಸೇರಿದಂತೆ ಸಪೋರ್ಟ್ ಸ್ಟಾಫ್‌ಗಳನ್ನ ವಜಾ ಮಾಡಿದೆ. 

ಕಳೆದ ಆವೃತ್ತಿಯ ಕಳಪೆ ಪ್ರದರ್ಶನದಿಂದ ಆರ್‌ಸಿಬಿ ಫ್ರಾಂಚೈಸಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಆದರೆ ಕಳೆದ ಬಾರಿ ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ಜವಾಬ್ದಾರಿ ನಿರ್ವಹಿಸಿದ ಆಶಿಶ್ ನೆಹ್ರಾ ಮುಂದಿನ ಐಪಿಎಲ್‌ನಲ್ಲೂ ಮುಂದುವರಿಯಲಿದ್ದಾರೆ.

ಹೆಡ್ ಕೋಚ್ ವೆಟ್ಟೋರಿ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸರ್ನ್ ಆಯ್ಕೆ ಮಾಡೋ ಸಾಧ್ಯತೆ ಹೆಚ್ಚಿದೆ. ಈ ಮೂಲಕ 12ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಬಲಿಷ್ಠ ತಂಡ ರೂಪಿಸಲು ಆರ್‌ಸಿಬಿ ಸಜ್ಜಾಗಿದೆ.