ಮುಂಬೈ(ಮೇ.05): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಸೋಲು ಅನುಭವಿಸಿದೆ  ಈ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇತ್ತ ಕೆಕೆಆರ್ ಟೂರ್ನಿಯಿಂದ ಹೊರಬಿತ್ತು. ವಿಶೇಷ ಅಂದರೆ ಕೆಕೆಆರ್ ಸೋಲಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದೆ.

ಗೆಲುವಿಗೆ 134 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯಿತು. ಕ್ವಿಂಟನ್ ಡಿಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 46 ರನ್ ಜೊತೆಯಾಟ ನೀಡಿದರು. ಡಿಕಾಕ್ 30 ರನ್ ಸಿಡಿಸಿ ಔಟಾದರು.

ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ರೋಹಿತ್‌ಗೆ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. ರೋಹಿತ್ ಅಜೇಯ 55 ರನ್ ಹಾಗೂ ಸೂರ್ಯಕುಮಾರ್ ಅಜೇಯ 46 ರನ್ ಸಿಡಿಸಿದರು. 16.1 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇತ್ತ ಕೆಕೆಆರ್ ಟೂರ್ನಿಗೆ ವಿದಾಯ ಹೇಳಿದರೆ, ಸನ್‌ರೈಸರ್ಸ್ ತಂಡ ರನ್‌ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿತು.