ಮೊಹಾಲಿ(ಮಾ.30): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿನ ಓಟ ಮುಂದುವರಿದೆ. ಕೆಎಲ್ ರಾಹುಲ್ ಅರ್ಧಶತಕ, ಕ್ರಿಸ್ ಗೇಲ್ ಹಾಗೂ ಮಯಾಂಕ್ ಅಬ್ಬರದಿಂದ ಬಲಿಷ್ಠ ಮಂಬೈ ವಿರುದ್ದ ತವರಿನಲ್ಲಿ ನಡೆದ ಪಂದ್ಯದಲ್ಲಿ KXIP 8 ವಿಕೆಟ್ ಗೆಲುವು ಸಾಧಿಸಿದೆ. ಆದರೆ RCB ವಿರದ್ಧ ಗೆಲುವಿನ ಹಳಿಗೆ ಮರಳಿದ್ದ ಮುಂಬೈ ಇಂಡಿಯನ್ಸ್ ಮತ್ತೆ ನಿರಾಸೆ ಅನುಭವಿಸಿದೆ.

ಗೆಲುವಿಗೆ 177 ರನ್ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 53 ರನ್ ಜೊತೆಯಾಟ ನೀಡಿತು. ಸಿಕ್ಸರ್ ಮೂಲಕ ಅಬ್ಬರಿಸಿದ ಗೇಲ್ ಐಪಿಎಲ್ ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. 24 ಎಸೆತಗಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ಮೂಲಕ ಗೇಲ್ 40 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ:  IPL 2019 ಕ್ರಿಕೆಟ್‌ನಲ್ಲಿ 300 ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ದಾಖಲೆ!

ಗೇಲ್ ವಿಕೆಟ್ ಪತನಗೊಂಡರೂ, ಕೆಎಲ್ ರಾಹುಲ್ ತಂಡಕ್ಕೆ ಆಸರೆಯಾದರು. ಕನ್ನಡಿಗರಾದ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್, ಮುಂಬೈ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು. ಮಯಾಂಕ್ 21 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು.

ಡೇವಿಡ್ ಮಿಲ್ಲರ್ ಜೊತೆ ಸೇರಿದ ರಾಹುಲ್, ಮುಂಬೈ ಬೌಲರ್‌ಗಳ ಬೆವರಿಳಿಸಿದರು. 18.4 ಓವರ್‌ಗಳಲ್ಲಿ ಪಂಜಾಬ್ ಗೆಲುವಿನ ದಡ ಸೇರಿತು. ರಾಹುಲ್ ಅಜೇಯ 71, ಡೇವಿಡ್ ಮಿಲ್ಲರ್ ಅಜೇಯ 15 ರನ್ ಸಿಡಿಸಿದರು. ಇನ್ನೂ 8 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿದ ಪಂಜಾಬ್ ತವರಿನ ಅಭಿಮಾನಿಗಳ ಮುಂದೆ ಸಂಭ್ರಮಾಚರಣೆ ನಡೆಸಿತು.