ದೆಹಲಿ(ಮಾ.30): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಸೂಪರ್ ಓವರ್‌ ತನಕ ತಲುಪಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ. ಗೆಲುವಿಗೆ 186 ರನ್ ಟಾರ್ಗೆಟ್ ಪಡೆದ ಡೆಲ್ಲಿ 185 ರನ್ ಸಿಡಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು. ಹೀಗಾಗಿ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಯ್ತು. 

ಗೆಲುವಿಗೆ 186 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಧವನ್ 16 ರನ್ ಸಿಡಿಸಿ ಔಟಾದರು. ಆದರೆ ಪೃಥ್ವಿ ಶಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಚೇತರಿಕೆ ನೀಡಿದರು. ಪೃಥ್ವಿ ಹಾಗೂ ಶ್ರೇಯಸ್ ಅಬ್ಬರಕ್ಕೆ ಕೆಕೆಆರ್ ಬೆಚ್ಚಿ ಬಿದ್ದಿತು. ಪೃಥ್ವಿ ಶಾ ಆಕರ್ಷಕ ಅರ್ಧಶತಕ ಸಿಡಿಸಿದರು.

ಪೃಥ್ವಿ ಶಾ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟಕ್ಕೆ ಆ್ಯಂಡ್ರೆ ರಸೆಲ್ ಬ್ರೇಕ್ ಹಾಕಿದರು. ಅಯ್ಯರ್ 32 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ  43 ರನ್ ಸಿಡಿಸಿ ಔಟಾದರು. ರಿಷಬ್ ಪಂತ್ ಜೊತೆ ಸೇರಿದ ಪೃಥ್ವಿ ಶಾ ಕೆಕೆಆರ್‌ಗೆ ತಿರುಗೇಟು ನೀಡಿದರು. ಅಬ್ಬರಿಸಿದ ಪೃಥ್ವಿ 55 ಎಸೆತದಲ್ಲಿ 99 ರನ್ ಸಿಡಿಸಿ ಕೇವಲ 1 ರನ್‌ಗಳಿಂದ ಶತಕ ವಂಚಿತರಾದರು.

ಪೃಥ್ವಿ ಶಾ ಪೆವಿಲಿಯನ್ ಸೇರುತ್ತಿದ್ದಂತೆ ಪಂದ್ಯ ರೋಚಕ ಘಟ್ಟ ತಲುಪಿತು. ಅಂತಿಮ 2 ಎಸೆತಕ್ಕೆ 2 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲಿ ಹನುಮಾ ವಿಹಾರಿ ವಿಕೆಟ್ ಪತನಗೊಂಡಿತು. ಹೀಗಾಗಿ ಡೆಲ್ಲಿ ಗೆಲುವಿನ ಹಾದಿ ಕಷ್ಟವಾಯಿತು. ಅಂತಿಮ ಎಸೆತದಲ್ಲಿ 2 ರನ್ ಕದಿಯಲು ಹೋದ ಕೊಲಿನ್ ಇನ್‌ಗ್ರಾಂ ರನೌಟ್‌ಗೆ ಬಲಿಯಾದರು. ಹೀಗಾಗಿ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.12ನೇ ಆವೃತ್ತಿಯಲ್ಲಿ ಟೈಗೊಂಡ ಮೊದಲ ಪಂದ್ಯ ಇದು.  ಫಲಿತಾಂಶ ನಿರ್ಧಾರಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯ್ತು.

ಸೂಪರ್ ಓವರ್‌ನಲ್ಲಿ ಡೆಲ್ಲಿ ಪರ ರಿಷಬ್ ಪಂತ್ ಹಾಗೂ ಶ್ರೇಯಸ್ ಕಣಕ್ಕಿಳಿದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ಕಳೆದುಕೊಂಡು 10 ರನ್ ಸಿಡಿಸಿತು. 11 ರನ್ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್‌ಗೆ ಆ್ಯಂಡ್ರೆ ರಸೆಲ್ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದರು. ಆದರೆ 3ನೇ ಎಸೆತದಲ್ಲಿ ರಸೆಲ್ ಕ್ಲೀನ್ ಬೋಲ್ಡ್ ಆದರು. ಅಂತಿಮ ಎಸೆತದಲ್ಲಿ ಕೆಕೆಆರ್ ಗೆಲುವಿಗೆ 5 ರನ್ ಬೇಕಿತ್ತು. ಆರೆ 1 ರನ್ ಗಳಿಸಿದ ಕೆಕೆಆರೋ ಸೋಲೊಪ್ಪಿಕೊಂಡಿತು. ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದ ಡೆಲ್ಲಿ ಮೈದಾನದಲ್ಲಿ ಸಂಭ್ರಮ ಆಚರಿಸಿತು.