ಜೈಪುರ(ಏ.22): ತವರಿನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆಗೆ ನಿರಾಸೆಯಾಗಿದೆ. ರಿಷಪ್ ಬಂತ್ ಅಬ್ಬರಕ್ಕೆ ರಾಜಸ್ಥಾನ ಸೋಲಿಗೆ ಶರಣಾಗಿದೆ. ರಾಜಸ್ಥಾನದ ಬೃಹತ್ ಟಾರ್ಗೆಟ್ ಚೇಸ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಗೆಲುವಿಗೆ 192 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಪೃಥ್ವಿ ಶಾ ಮೊದಲ ವಿಕೆಟ್‌ಗೆ 72 ರನ್ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಧವನ್ ಕೇವಲ 25 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ದವನ್ 27 ಎಸೆತದಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿ ಔಟಾದರು.

ನಾಯಕ ಶ್ರೇಯಸ್ ಅಯ್ಯರ್ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಜೊತೆಯಾಟ ಡೆಲ್ಲಿ ತಂಡಕ್ಕೆ ನೆರವಾಯಿತು. ಅಬ್ಬರಿಸಿದ ಪಂತ್ ಅರ್ಧಶತಕ ಸಿಡಿಸಿದರು. ಆದರೆ ಪೃಥ್ವಿ ಶಾ 42 ರನ್ ಸಿಡಿಸಿ ಔಟಾದರು. ಶೆರ್ಫಾನ್ ರುಥ್‌ಪೋರ್ಡ್ 11 ರನ್ ಸಿಡಿಸಿ ನಿರ್ಗಮಿಸಿದರು.

ಅಂತಿಮ 12 ಎಸೆತದಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ರಿಷಬ್ ಪಂತ್ ಸಿಕ್ಸರ್ ಮೂಲಕವೇ ಡೆಲ್ಲಿ ತಂಡಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು. ಇನ್ನು 4 ಎಸೆತ ಬಾಕಿ ಇರುವಂತೆ ಡೆಲ್ಲಿ ಗೆಲುವಿನ ಕೇಕೆ ಹಾಕಿತು. ಪಂತ್ 36 ಎಸೆತದಲ್ಲಿ ಅಜೇಯ 78 ರನ್ ಸಿಡಿಸಿದರು.