ಮುಂಬೈ(ಏ.10): ಮುಂಬೈನ ವಾಂಖೆಡೆ ಕ್ರೀಡಾಂಗಣ ಕ್ರಿಸ್ ಗೇಲ್ ಹಾಗೂ ಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಯಿತು. ಭರ್ಜರಿ 7 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿದ ಗೇಲ್ ಅಭಿಮಾನಿಗಳನ್ನು ರಂಜಿಸಿದರು. ಇತ್ತ ರಾಹುಲ್ 6 ಸಿಕ್ಸರ್ ಹಾಗೂ 6 ಬೌಂಡರಿ ಮೂಲಕ  ಅಬ್ಬರಿಸಿದರು.  ಗೇಲ್ ಹಾಗೂ ರಾಹುಲ್ ಅಬ್ಬರದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು. ಇದೀಗ ಮುಂಬೈ ತವರಿನಲ್ಲಿ ಗೆಲುವಿಗಾಗಿ 198 ರನ್ ಗಳಿಸಬೇಕಿದೆ.

ಮುಂಬೈ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವ ಕಾರಣ ಅನಿವಾರ್ಯವಾಗಿ ಬದಲಾವಣೆ ಮಾಡಿತು. ರೋಹಿತ್ ಬದಲು ಸಿದ್ದೇಶ್ ಲಾಡ್ ತಂಡ ಸೇರಿಕೊಂಡರೆ, ಕೀರನ್ ಪೊಲಾರ್ಡ್ ನಾಯಕತ್ವ ವಹಿಸಿಕೊಂಡರು. ಇತ್ತ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್‌ಗೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅದ್ಬುತ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 116 ರನ್ ಜೊತೆಯಾಟ ನೀಡಿತು.

ಗೇಲ್ 36 ಎಸೆತದಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ಔಟಾದರು. ಇನ್ನು ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಡೇವಿಡ್ ಮಿಲ್ಲರ್, ಕರುಣ್ ನಾಯರ್ ಬಹುಬೇಗನೆ ವಿಕೆಟ್ ಕಳೆದುಕೊಂಡರು. ಸ್ಯಾಮ್ ಕುರ್ರನ್ 8 ರನ್ ಸಿಡಿಸಿ ಔಟಾದರು. 

ಅಬ್ಬರಿಸಿದ ರಾಹುಲ್ 63 ಎಸೆತದಲ್ಲಿ ಸೆಂಚುರಿ ಸಿಡಿಸಿದರು. ಈ ಮೂಲಕ ಐಪಿಎಲ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ರಾಹುಲ್ 64 ಎಸೆತದಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿ ಮೂಲಕ ಅಜೇಯ 100 ರನ್ ಸಿಡಿಸಿದರು. ಈ ಮೂಲಕ  ಪಂಜಾಬ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.