ವಿಶಾಖಪಟ್ಟಣಂ(ಮೇ.10): ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೇರೋ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ಈಡೇರಲಿಲ್ಲ. 12ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಟೂರ್ನಿಯಿಂದ ಹೊರಬಿದ್ದಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಲ್ರೌಂಡರ್ ಪ್ರದರ್ಶನಕ್ಕೆ ಡೆಲ್ಲಿ ಸೋತು ಶರಣಾಯಿತು. 6 ವಿಕೆಟ್ ಗೆಲುವು ಸಾಧಿಸಿದ ಚೆನ್ನೈ ಫೈನಲ್ ಪ್ರವೇಶಿಸಿದೆ. 

ಗೆಲುವಿಗೆ 148 ರನ್ ಸುಲಭ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಮೊದಲ ವಿಕೆಟ್‌ಗೆ 81 ರನ್ ಜೊತೆಯಾಟ ನೀಡೋ ಮೂಲಕ ಚೆನ್ನೈ ಗೆಲುವಿನ ಹಾದಿ ಸುಗಮಗೊಳಿಸಿದರು. ಡುಪ್ಲೆಸಿಸ್ 39 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 50 ರನ್ ಸಿಡಿಸಿ ಔಟಾದರು.

ಮೊದಲ ವಿಕೆಟ್ ಕಬಳಿಸಿದ ಸಂಭ್ರಮ ಡೆಲ್ಲಿ ತಂಡದಲ್ಲಿರಲಿಲ್ಲ. ಕಾರಣ CSK ಆಗಲೇ ಗೆಲುವಿನತ್ತ ದಾಪುಗಾಲಿಟ್ಟಿತು. ಡುಪ್ಲೆಸಿಸ್ ಬಳಿಕ ವ್ಯಾಟ್ಸನ್ ಅಬ್ಬರ ಆರಂಭಗೊಂಡಿತು. ವ್ಯಾಟ್ಸನ್ 32 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಸುರೇಶ್ ರೈನಾ 11 ರನ್ ಸಿಡಿಸಿ ಔಟಾದರು. CSK ಗೆಲುವಿಗೆ ಇನ್ನು 2 ರನ್ ಬೇಕಿತ್ತು. ಅಷ್ಟರಲ್ಲಿ ಎಂ.ಎಸ್.ಧೋನಿ ವಿಕೆಟ್ ಪತನಗೊಂಡಿತು.   ಅಂಬಾಟಿ ರಾಯುಡು ಡ್ವೇನ್ ಬ್ರಾವೋ  CSK ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನೂ 6 ಎಸೆತ ಬಾಕಿ ಇರುವಂತೆ CSK 6 ವಿಕೆಟ್ ಗೆಲುವು ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದ ಚೆನ್ನೈ ಫೈನಲ್ ಪ್ರವೇಶಿಸಿತು. ಇದೀಗ ಮೇ. 12 ರಂದು ನಡೆಯಲಿರುವ ಪ್ರಸಸ್ತಿ ಸುತ್ತಿನ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. ಈ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಆದರೆ ಯುವ ಆಟಗಾರರಿಂದ ಕೂಡಿದ ಡೆಲ್ಲಿ ಮಹತ್ವದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ  ಟೂರ್ನಿಯಿಂದ ಹೊರಬಿತ್ತು.