ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂದೆನಿಸಿದರು.

ಬೆಂಗಳೂರು(ಫೆ.20): ನಿರೀಕ್ಷೆಯಂತೆಯೇ ಐಪಿಎಲ್ 10 ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.

2017ರ ಐಪಿಎಲ್ ಹರಾಜಿನಲ್ಲಿ ಒಟ್ಟು 66 ಆಟಗಾರರು ಬಿಕರಿಯಾಗಿದ್ದು, ಇಬ್ಬರು ಆಪ್ಘಾನಿಸ್ತಾನದ ಹಾಗೂ ಓರ್ವ ಯುಎಇ ಆಟಗಾರ ಕೂಡ ಐಪಿಎಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂದೆನಿಸಿದರು. ಸ್ಟೋಕ್ಸ್ ಅವರನ್ನು 14.5 ಕೋಟಿ ರೂಪಾಯಿ ಮೊತ್ತಕ್ಕೆ ಪುಣೆ ಸೂಪರ್'ಜೈಂಟ್ಸ್ ಪಾಲಾದರು. ಇನ್ನು ತೈಮಲ್ ಮಿಲ್ಸ್ 12 ಕೋಟಿ ರೂಪಾಯಿಗೆ ಆರ್'ಸಿಬಿ ತಂಡ ಖರೀದಿಸಿತು.

ಇದೇ ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದ ಆಪ್ಘಾನಿಸ್ತಾನ ಆಟಗಾರರಲ್ಲಿ ರಶೀದ್ ಖಾನ್ 4 ಕೋಟಿ ರೂಪಾಯಿಗೆ ಹಾಗೂ ಸಹ ಆಟಗಾರ ಮೊಹಮ್ಮದ್ ನಬೀ 30 ಲಕ್ಷ ರೂಪಾಯಿಗೆ ಸನ್'ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು. ಇನ್ನು ಯುಎಇ ಆಟಗಾರ ಚಿರಾಗ್ ಸೂರಿ 10 ಲಕ್ಷ ರೂಪಾಯಿಗೆ ಗುಜರಾತ್ ಲಯನ್ಸ್ ತಂಡ ಖರೀದಿಸಿತು.

ಇನ್ನು ಅಚ್ಚರಿಯ ವಿಚಾರವೆಂದರೆ, ಇಮ್ರಾನ್ ತಾಹಿರ್, ಇಶಾಂತ್ ಶರ್ಮಾ ಹಾಗೂ ಇರ್ಫಾನ್ ಪಠಾಣ್ ಅವರನ್ನು ಕೊಂಡುಕೊಳ್ಳಲು ಯಾವುದೇ ಪ್ರಾಂಚೈಸಿಗಳು ಉತ್ಸಾಹ ತೋರಲಿಲ್ಲ. ಅದರಲ್ಲೂ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ತಾಹಿರ್ ಅವರನ್ನು ಕಡೆಗಣಿಸಿದ್ದು ಕ್ರಿಕೆಟ್ ಪ್ರಿಯರಲ್ಲಿ ಹುಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ.